image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಾಜಿ ಸೈನಿಕರ ECHS ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಮಾಜಿ ಸೈನಿಕರ ECHS ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ನವದೆಹಲಿ: ಲೋಕಸಭೆಯ ನಿಯಮ 377ರ ಅಡಿಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೇವಾ ನಿವೃತ್ತ ಯೋಧರು ಹಾಗೂ ಅವರ ಕುಟುಂಬಸ್ಥರ ವೈದ್ಯಕೀಯ ಭದ್ರತೆಯ ಪರವಾಗಿ ಧ್ವನಿಯೆತ್ತಿದ್ದಾರೆ. ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS) ಯಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳ ಕ್ಲೈಮ್‌ಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ರಕ್ಷಣಾ ಸಚಿವಾಲಯವು ಶಾಶ್ವತ ವ್ಯವಸ್ಥೆ ರೂಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಒಬ್ಬ ಯೋಧನಾಗಿ ಹಾಗೂ ಪ್ರಸ್ತುತ ಸಂಸದನಾಗಿ ಸೇನಾ ನಿವೃತ್ತ ಯೋಧರ ಆರೋಗ್ಯ ಭದ್ರತೆ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದು ತಮ್ಮ ಕರ್ತವ್ಯ ಎಂದು ಹೇಳಿದ ಸಂಸದರು, ECHS ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳ ಮರುಪಾವತಿ ಕ್ಲೈಮ್‌ಗಳು ಸಕಾಲಕ್ಕೆ ವಿಲೇವಾರಿಯಾಗದೆ ಬಾಕಿ ಉಳಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ನಿಗದಿತ ಕಾರಣಗಳಿಲ್ಲದೆ ಅನಗತ್ಯ ಮಾಹಿತಿ ಕೇಳುವುದರಿಂದ ಆಸ್ಪತ್ರೆಗಳು ಆರ್ಥಿಕ ತೊಂದರೆಗೆ ಒಳಗಾಗಿ, ಸೀಮಿತ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿವೆ ಅಥವಾ ಯೋಜನೆಯಿಂದಲೇ ಹಿಂದೆ ಸರಿಯುತ್ತಿವೆ. ಇದರ ನೇರ ಪರಿಣಾಮದಿಂದ ಹಿರಿಯ ಫಲಾನುಭವಿಗಳು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಅಲೆಯುವ, ವೈದ್ಯಕೀಯ ಸೇವೆ ವಿಳಂಬವಾಗುವ ಅಥವಾ ಸ್ವಂತ ಹಣದಿಂದ ಚಿಕಿತ್ಸೆ ಪಡೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈ ಸಮಸ್ಯೆಗೆ ಕೇಂದ್ರ ರಕ್ಷಣಾ ಸಚಿವಾಲಯ ತಕ್ಷಣವೇ ಮಧ್ಯಪ್ರವೇಶಿಸಿ, ರಾಷ್ಟ್ರೀಯ ಮಟ್ಟದಲ್ಲಿ ಕಾಲಮಿತಿಯ ಕ್ಲೈಮ್ ವಿಲೇವಾರಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಆರಂಭಿಕ ಪರಿಶೀಲನೆ, ವೈದ್ಯಕೀಯ ಆಡಿಟ್, ಸ್ಪಷ್ಟನೆ ಹಾಗೂ ಅಂತಿಮ ಅನುಮೋದನೆಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು ಮತ್ತು ಒಂದೇ ಕ್ಲೈಮ್‌ಗೆ ಪದೇ ಪದೇ ಹಂತ-ಹಂತವಾಗಿ ಆಕ್ಷೇಪಣೆ ಎತ್ತುವುದನ್ನು ಕೈಬಿಡಬೇಕು ಎಂದಿದ್ದಾರೆ. ಪ್ರತಿಯೊಂದು ಬಿಲ್‌ನ ಸ್ಥಿತಿಗತಿ, ಬಾಕಿಯಿರುವ ಸಮಯ ಹಾಗೂ ಕಡತವಿರುವ ಅಧಿಕಾರಿಯ ವಿವರ ತಿಳಿಯಲು ಪ್ರತ್ಯೇಕ ಎಲೆಕ್ಟ್ರಾನಿಕ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ರೂಪಿಸಬೇಕೆಂಬುದು ಅವರ ಮನವಿಯಾಗಿದೆ.

ಅಲ್ಲದೆ, ನಿಗದಿತ ಸಮಯ ಮೀರಿದ ಕ್ಲೈಮ್‌ಗಳನ್ನು ವಿಲೇವಾರಿ ಮಾಡಲು ಪ್ರಾದೇಶಿಕ ಉಸ್ತುವಾರಿ ಅಧಿಕಾರಿಯನ್ನು ನೇಮಿಸುವುದು, ಬಾಕಿ ಮೊತ್ತದ ವಿವರಗಳನ್ನು ನಿಯಮಿತವಾಗಿ ಪ್ರಕಟಿಸುವುದು, ಆಸ್ಪತ್ರೆಗಳು ಸೇವೆ ಸ್ಥಗಿತಗೊಳಿಸುವ ಮುನ್ನ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಮಾಡುವುದು ಹಾಗೂ ಆಂತರಿಕ ಲೆಕ್ಕಪರಿಶೋಧನೆ ನೆಪದಲ್ಲಿ ಕ್ಯಾಶ್‌ಲೆಸ್ ಚಿಕಿತ್ಸೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಕ್ಯಾ. ಚೌಟ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ