image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೇಶದ ಅಭಿವೃದ್ಧಿ ಹೊಗಳುವವರು ದುಬೈನಲ್ಲೇಕಿದ್ದಾರೆ?: ನಟರ ವಿರುದ್ಧ ರಾಜ್‌ ಠಾಕ್ರೆ ವಾಗ್ದಾಳಿ

ದೇಶದ ಅಭಿವೃದ್ಧಿ ಹೊಗಳುವವರು ದುಬೈನಲ್ಲೇಕಿದ್ದಾರೆ?: ನಟರ ವಿರುದ್ಧ ರಾಜ್‌ ಠಾಕ್ರೆ ವಾಗ್ದಾಳಿ

ಮುಂಬೈ : ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ವಿದ್ಯಾರ್ಥಿ ಘಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ಹಾಗೂ ಬಾಲಿವುಡ್ ನಟರ ನಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದಲ್ಲೆಲ್ಲವೂ ಅದ್ಭುತವಾಗಿ ನಡೆಯುತ್ತಿದೆ ಎಂದು ಪ್ರತಿಪಾದಿಸುವ ಬಾಲಿವುಡ್ ನಟರು ಭಾರತದಲ್ಲೇ ವಾಸಿಸದೆ ದುಬೈನಲ್ಲಿ ನೆಲೆಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಜೀವನಾಧಾರಿತ ಸಿನಿಮಾದಲ್ಲಿ ಮೋದಿಯವರ ಪಾತ್ರ ಅಭಿನಯಿಸಿದ್ದ ನಟ ವಿವೇಕ್ ಒಬೆರಾಯ್ ಹಾಗೂ ಪ್ರಧಾನಿಯವರನ್ನು ಶ್ಲಾಘಿಸಿದ್ದ ನಟ ಆರ್. ಮಾಧವನ್ ಅವರ ಉದಾಹರಣೆ ನೀಡಿದ ರಾಜ್ ಠಾಕ್ರೆ, "ನಿಮಗೆ ಭಾರತ ಮತ್ತು ಪ್ರಧಾನಿ ಮೋದಿ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ, ದೇಶ ಅಭಿವೃದ್ಧಿಯಾಗುತ್ತಿದೆ ಎಂದು ನೀವು ನಿಜಕ್ಕೂ ನಂಬಿದ್ದರೆ ಕುಟುಂಬ ಸಮೇತ ವಿದೇಶಿ ನೆಲದಲ್ಲಿ ಏಕೆ ನೆಲೆಸಿದ್ದೀರಿ?" ಎಂದು ತೀವ್ರವಾಗಿ ಹರಿಹಾಯ್ದಿದ್ದಾರೆ. ಕೆಲವು ನಟರು ಭಾರತಕ್ಕೆ ಬಂದು 'ಧುರಂಧರ್' ನಂತಹ ಸರ್ಕಾರಿ ಪ್ರಾಯೋಜಿತ ಚಿತ್ರಗಳಲ್ಲಿ ಕೆಲಸ ಮಾಡಿ ಬಳಿಕ ದುಬೈಗೆ ಮರಳುತ್ತಾರೆ ಎಂದು ಕಿಡಿಕಾರಿದ ಅವರು, ದೇಶದ ಸಾವಿರಾರು ಕೈಗಾರಿಕೋದ್ಯಮಿಗಳು ಕೂಡ ತಮ್ಮ ಉದ್ಯಮಗಳನ್ನು ಗುಡಿಸಿಕೊಂಡು ದೇಶ ತೊರೆಯುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಪ್ರಧಾನಿ ವಿರುದ್ಧ ಬಳಸಿದ ಭಾಷೆಯನ್ನು ಖಂಡಿಸಿದ ಅವರು, ದಾರಿ ತಪ್ಪಿದ ಮಕ್ಕಳನ್ನು ಕ್ಷಮಿಸಿ ಸರಿಯಾದ ದಾರಿಗೆ ತರಬೇಕು ಎಂಬ ಪ್ರಧಾನಿಯವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಆದರೆ, ಯಾರೂ ಅಂತಹ ಕೀಳುಮಟ್ಟದ ಭಾಷೆಯನ್ನು ಬಳಸಬಾರದು ಎಂಬ ನಿಯಮ ಬಿಜೆಪಿಯವರಿಗೂ ಅನ್ವಯಿಸಬೇಕು ಎಂದಿದ್ದಾರೆ. ಬಿಜೆಪಿಯ ಟ್ರೋಲ್ ಪೇಜ್‌ಗಳು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಠಾಕ್ರೆ ಕುಟುಂಬ ಸೇರಿದಂತೆ ರಾಷ್ಟ್ರೀಯ ಐಕಾನ್‌ಗಳನ್ನು ಗುರಿಯಾಗಿಸಿಕೊಂಡು ಕೀಳುಮಟ್ಟದ ಟ್ರೋಲಿಂಗ್ ಸಂಸ್ಕೃತಿಯನ್ನು ಮೊದಲು ಆರಂಭಿಸಿದವು ಎಂದು ಆರೋಪಿಸಿದ ಅವರು, ತಮ್ಮದೇ ಪಕ್ಷದ ಬೆಂಬಲಿಗರಿಗೂ ಇಂತಹ ಅವಹೇಳನಕಾರಿ ಭಾಷೆ ಬಳಕೆಯನ್ನು ನಿಲ್ಲಿಸುವಂತೆ ಪ್ರಧಾನಿ ಮೋದಿ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ