ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ, ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ಸಂಸತ್ ಭವನವನ್ನು ಪ್ರವೇಶಿಸಿರುವುದು ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ಭಾರಿ ಕೋಲಾಹಲ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಂಸತ್ತಿನ ಅಧಿವೇಶನಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ದೇಶದ ಆಂತರಿಕ ಅಥವಾ ಬಾಹ್ಯ ಭದ್ರತೆಗೆ ಗಂಭೀರ ಬೆದರಿಕೆ ಎದುರಾದಾಗ ಮಾತ್ರ ಪ್ರಧಾನಮಂತ್ರಿಗಳ ಕಚೇರಿ (PMO) ಅಥವಾ ಗೃಹ ಸಚಿವಾಲಯದ ಮಟ್ಟದಲ್ಲಿ ಇಂತಹ ಚರ್ಚೆಗಳು ನಡೆಯುತ್ತವೆ. ಆದರೆ, ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪ್ರತಿಭಟನೆಗಳ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಭಾರತದ 'ಜೇಮ್ಸ್ ಬಾಂಡ್' ಎಂದೇ ಹೆಸರುವಾಸಿಯಾದ ದೋವಲ್ ಸಂಸತ್ತಿಗೆ ಎಂಟ್ರಿ ಕೊಟ್ಟಿರುವುದು ವಿವಿಧ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಅಜಿತ್ ದೋವಲ್ ಅವರ ಈ ಅಪರೂಪದ ಭೇಟಿಯ ಹಿಂದೆ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರಗಳಿವೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ತದನಂತರ ನಡೆದ ಸುದೀರ್ಘ ಪ್ರತಿಭಟನೆಗಳ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರತಿಭಟನೆಯ ಹೆಸರಿನಲ್ಲಿ ವಿದೇಶಿ ಶಕ್ತಿಗಳ ಕೈವಾಡ, ಪಾಕಿಸ್ತಾನ ಹಾಗೂ ಖಲಿಸ್ತಾನಿ ಬೆಂಬಲಿಗರ ಸಕ್ರಿಯ ಪಾತ್ರವಿರುವ ಕುರಿತು ವರದಿಗಳು ಹೊರಬಿದ್ದಿವೆ. ಅಷ್ಟೇ ಅಲ್ಲದೆ, ಪ್ರತಿಭಟನೆ ವೇಳೆ ಕಂಡುಬಂದ ವಿದೇಶಿ ಬಾವುಟಗಳು ಹಾಗೂ ಭಾರತದ ವಿರುದ್ಧ ಷಡ್ಯಂತ್ರ ರೂಪಿಸಲು ಸಕ್ರಿಯವಾಗಿದ್ದ 150ಕ್ಕೂ ಹೆಚ್ಚು ಪಾಕಿಸ್ತಾನಿ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಯುತ್ತಿದೆ.
ಈ ವಿಚಾರವು ಶೈಕ್ಷಣಿಕ ವ್ಯಾಪ್ತಿಯನ್ನು ಮೀರಿ ದೇಶದ ಆಂತರಿಕ ಭದ್ರತೆಯ ವಿಷಯವಾಗಿ ಮಾರ್ಪಟ್ಟಿರುವುದರಿಂದ ಅಜಿತ್ ದೋವಲ್ ಅವರ ಸಂಸತ್ ಪ್ರವೇಶಕ್ಕೆ ಅತ್ಯಂತ ಪ್ರಾಮುಖ್ಯತೆ ದೊರೆತಿದೆ. ಪ್ರಮುಖ ಭದ್ರತಾ ವಿಷಯಗಳ ಕುರಿತು ಸಚಿವರಿಗೆ ಮಾಹಿತಿ ನೀಡಲು ಅವರು ಆಗಮಿಸಿದ್ದಾರೆಯೇ ಅಥವಾ ಪ್ರಧಾನಿ ನೇತೃತ್ವದಲ್ಲಿ ಯಾವುದಾದರೂ ಸೂಕ್ಷ್ಮ ರಹಸ್ಯ ಸಭೆ ನಡೆಯಲಿದೆಯೇ ಎಂಬ ಚರ್ಚೆಗಳು ಕಾವು ಪಡೆದುಕೊಂಡಿವೆ. ಸಂಸತ್ತಿನಲ್ಲಿ ದೋವಲ್ ಅವರ ಈ ದಿಢೀರ್ ಉಪಸ್ಥಿತಿ ವಿಪಕ್ಷಗಳಲ್ಲಿಯೂ ಹಲವು ಅನುಮಾನ ಹಾಗೂ ತಲ್ಲಣಗಳನ್ನು ಹುಟ್ಟುಹಾಕಿದೆ.