ಮುಂಬೈ : ಗುರುಪೂರ್ಣಿಮೆಯ ಪವಿತ್ರ ದಿನದಂದು ಕ್ರಿಕೆಟ್ ಜಗತ್ತಿನ ಮಹಾನ್ ಆಟಗಾರ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಕೋಚ್ ಹಾಗೂ ಇಡೀ ವೃತ್ತಿಜೀವನದ ಬೆನ್ನೆಲುಬಾಗಿದ್ದ ದಿವಂಗತ ರಮಾಕಾಂತ್ ಅಚ್ರೇಕರ್ ಅವರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿರುವ ಅಚ್ರೇಕರ್ ಅವರ ಸ್ಮಾರಕಕ್ಕೆ ಭೇಟಿ ನೀಡಿದ ಸಚಿನ್, ಶ್ರದ್ಧಾಭಕ್ತಿಯಿಂದ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಈ ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, "ಇಲ್ಲಿ ನಿಂತು ಕೈಮುಗಿದಾಗ ಭಾವುಕನಾಗುತ್ತೇನೆ. ಎಷ್ಟು ಕಾಲ ಉರುಳಿದರೂ, ಎಷ್ಟು ಸಮಯ ಕಳೆದರೂ ನಿಮ್ಮ ಮಾರ್ಗದರ್ಶನಕ್ಕೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ನನ್ನ ಮೇಲೆ ಭರವಸೆ ಇಟ್ಟು ಕೈಹಿಡಿದು ಮುನ್ನಡೆಸಿದ ನಿಮಗೆ ಧನ್ಯವಾದಗಳು, ನಿಮಗೆ ಗುರುಪೂರ್ಣಿಮೆ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. 2019ರ ಜನವರಿಯಲ್ಲಿ ನಿಧನರಾದ ರಮಾಕಾಂತ್ ಅಚ್ರೇಕರ್ ಅವರ ನೆನಪಿನಲ್ಲಿ ಶಿವಾಜಿ ಪಾರ್ಕ್‌ನಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ಸಚಿನ್ ತೆಂಡೂಲ್ಕರ್ ಇಂದಿಗೂ ತಮ್ಮ ಗುರುವಿನ ಆಶೀರ್ವಾದ ಪಡೆಯಲು ಈ ಪಾರ್ಕ್‌ಗೆ ತೆರಳುತ್ತಾರೆ.
ಸಚಿನ್ ತೆಂಡೂಲ್ಕರ್ ಅವರಲ್ಲಿದ್ದ ದೈತ್ಯ ಪ್ರತಿಭೆಯನ್ನು ಮೊದಲು ಗುರುತಿಸಿ, ಪಳಗಿಸಿ, ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ರೂಪಿಸಿದ್ದು ಇದೇ ರಮಾಕಾಂತ್ ಅಚ್ರೇಕರ್. ಅವರಿಗೆ ಕ್ರಿಕೆಟ್‌ನ ಶಿಸ್ತು, ತಾಳ್ಮೆ ಹಾಗೂ ಸ್ಫೋಟಕ ಬ್ಯಾಟಿಂಗ್ ತಂತ್ರಗಳನ್ನು ಕಲಿಸಿಕೊಟ್ಟ ಅಚ್ರೇಕರ್ ಅವರ ಗರಡಿಯಲ್ಲಿ ಸಚಿನ್ ಮಾತ್ರವಲ್ಲದೆ ವಿನೋದ್ ಕಾಂಬ್ಳಿ, ಅಜಿತ್ ಅಗರ್ಕರ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟಿಗರು ಪಳಗಿದ್ದಾರೆ. 1989ರಿಂದ 2013ರವರೆಗೆ ಸತತ 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ಆಳಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಚಿನ್, ತಮ್ಮ ಈ ಎಲ್ಲಾ ಯಶಸ್ಸಿನ ಮೂಲ ಪ್ರೇರಣೆಯಾದ ಗುರುವಿಗೆ ಗುರುಪೂರ್ಣಿಮೆಯಂದು ಕೃತಜ್ಞತೆ ಸಲ್ಲಿಸಿದ್ದಾರೆ.