ನವದೆಹಲಿ : ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರ ವಿರುದ್ಧದ ಬಹುಚರ್ಚಿತ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದ ಕಾನೂನು ನಡಾವಳಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಅಧಿಕೃತವಾಗಿ ಮುಕ್ತಾಯಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮುಕ್ತಾಯ ವರದಿಗಳನ್ನು (ಕ್ಲೋಸರ್ ರಿಪೋರ್ಟ್) ಮಾನ್ಯ ಮಾಡಿರುವ ನ್ಯಾಯಪೀಠವು, 2015 ರಲ್ಲಿ ಡಾ. ಸಿಂಗ್ ಅವರನ್ನು ಆರೋಪಿಯನ್ನಾಗಿ ಸಮನ್ಸ್ ಜಾರಿಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಈ ಮೂಲಕ ಮಾಜಿ ಪ್ರಧಾನಿಗೆ ಮರಣೋತ್ತರವಾಗಿ ಸಂಪೂರ್ಣ ನಿರ್ದೋಷಿ ಎಂಬ ಗೌರವ ದೊರೆತಂತಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಪ್ರಕರಣದ ಗುಣಾವಗುಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ತೀರ್ಪು ನೀಡಿದೆ. ಒಡಿಶಾದ ‘ತಾಳಬೀರಾ-2’ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್‌ಗಳನ್ನು ತಿರಸ್ಕರಿಸಲು ಯಾವುದೇ ಸಮರ್ಥನೀಯ ಮತ್ತು ಬಲವಾದ ಕಾರಣಗಳು ಕಂಡುಬಂದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಡಾ. ಮನ್ಮೋಹನ್ ಸಿಂಗ್ ಅವರ ಅಗಲಿಕೆಯ ನಂತರ ತಾಂತ್ರಿಕವಾಗಿ ಪ್ರಕರಣ ನಿರರ್ಥಕಗೊಂಡಿದ್ದರೂ, ಅವರ ಗೌರವ ಹಾಗೂ ಮೇಲಿದ್ದ ಆರೋಪಗಳ ಕಾನೂನಾತ್ಮಕ ಸ್ಪಷ್ಟತೆಗಾಗಿ ನ್ಯಾಯಾಲಯವು ಈ ಅಂತಿಮ ನಿರ್ಧಾರಕ್ಕೆ ಬಂದಿದೆ.
1993 ಮತ್ತು 2010 ರ ನಡುವೆ ನಡೆದ ಕಲ್ಲಿದ್ದಲು ಬ್ಲಾಕ್ ಹಂಚಿಕೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 2014 ರಲ್ಲಿ ಸುಪ್ರೀಂ ಕೋರ್ಟ್ ಹಲವು ಹಂಚಿಕೆಗಳನ್ನು ರದ್ದುಗೊಳಿಸಿತ್ತು. ಆದಾಗ್ಯೂ, ಮನ್ಮೋಹನ್ ಸಿಂಗ್ ಅವರ ಪಾತ್ರದ ಕುರಿತು ತನಿಖೆ ನಡೆಸಿದ್ದ ಸಿಬಿಐ, ಅವರ ವಿರುದ್ಧ ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲವೆಂದು ಸ್ಪಷ್ಟಪಡಿಸಿ ಕ್ಲೋಸರ್ ರಿಪೋರ್ಟ್ ಸಲ್ಲಿಸಿತ್ತು. ಆದರೆ 2015 ರಲ್ಲಿ ವಿಶೇಷ ಸಿಬಿಐ ಕೋರ್ಟ್ ಆ ವರದಿಯನ್ನು ತಳ್ಳಿಹಾಕಿ ಸಮನ್ಸ್ ಜಾರಿ ಮಾಡಿತ್ತು. ಇದೀಗ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರ ವಾದವನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಸುದೀರ್ಘ ಆರೋಪಗಳಿಗೆ ಸಂಪೂರ್ಣ ತೆರೆ ಎಳೆದಿದೆ.