image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕರೂರು ದುರಂತ : ಸಂತ್ರಸ್ತರ ಕುಟುಂಬಗಳಿಗೆ ನೀಡಿದ್ದ ಉದ್ಯೋಗ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಕರೂರು ದುರಂತ : ಸಂತ್ರಸ್ತರ ಕುಟುಂಬಗಳಿಗೆ ನೀಡಿದ್ದ ಉದ್ಯೋಗ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಚೆನ್ನೈ : ತಮಿಳುನಾಡಿನ ಕರೂರು ಕಾಲ್ತುಳಿತ ದುರಂತದ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಕೆಲಸ ನೀಡಲು ನಿರ್ಧರಿಸಿದ್ದ ಮುಖ್ಯಮಂತ್ರಿ ವಿಜಯ್ ನೇತೃತ್ವದ 'ಟಿವಿಕೆ' (TVK) ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಭಾರಿ ಹಿನ್ನಡೆ ಉಂಟುಮಾಡಿದೆ. ಸಂತ್ರಸ್ತರ ಕುಟುಂಬಸ್ಥರಿಗೆ ನೀಡಲಾಗಿದ್ದ ಸಾರ್ವಜನಿಕ ಉದ್ಯೋಗ ನೇಮಕಾತಿ ಆದೇಶಗಳನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದ್ದು, ಸರ್ಕಾರದ ಈ ನಿರ್ಧಾರವು ಭಾರತೀಯ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 16ರ (ಉದ್ಯೋಗದಲ್ಲಿ ಸಮಾನ ಅವಕಾಶ) ನೇರ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಸರ್ಕಾರಿ ಹುದ್ದೆಗಳಿಗಾಗಿ ಲಕ್ಷಾಂತರ ಅಭ್ಯರ್ಥಿಗಳು ಅರ್ಹತೆಯ ಆಧಾರದ ಮೇಲೆ ಸಾಲಿನಲ್ಲಿ ಕಾಯುತ್ತಿದ್ದಾರೆ ಎಂದು ಪ್ರತಿಪಾದಿಸಿದೆ. ಇಂತಹ ಸಂದರ್ಭದಲ್ಲಿ ಕರೂರು ದುರಂತದ ಸಂತ್ರಸ್ತರ ಕುಟುಂಬಗಳಿಗೆ ನಿಯಮಗಳನ್ನು ಮೀರಿ ಕೆಲಸ ನೀಡುವುದು ಮತ್ತು ಉಳಿದ ಅಭ್ಯರ್ಥಿಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅದಲ್ಲದೆ, ಸೇವಾ ಅವಧಿಯಲ್ಲಿ ಕುಟುಂಬದವರನ್ನು ಕಳೆದುಕೊಂಡು ಅನುಕಂಪದ ಆಧಾರದ ಉದ್ಯೋಗಕ್ಕಾಗಿ ಕಾಯುವವರ ಪಟ್ಟಿಯೂ ದೊಡ್ಡದಾಗಿದ್ದು, ಅವರನ್ನು ಬದಿಗೊತ್ತಿ ವಿಶೇಷ ಸೌಲಭ್ಯ ನೀಡುವುದು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಖಡಕ್ ಆಗಿ ತಿಳಿಸಿದೆ.

ಸರ್ಕಾರದ ಈ ನಿರ್ಧಾರವನ್ನು ಎತ್ತಿಹಿಡಿದರೆ, ಮುಂದೆ ಇತರ ದುರಂತಗಳು ಸಂಭವಿಸಿದಾಗಲೂ ಜನರು ಇದೇ ರೀತಿ ನೇರ ಉದ್ಯೋಗಕ್ಕಾಗಿ ಹಕ್ಕು ಸಾಧಿಸುವ ತಪ್ಪು ಪರಂಪರೆ ಸೃಷ್ಟಿಯಾಗುತ್ತದೆ. ಇದರಿಂದ ನಿಷ್ಠೆಯಿಂದ ಪರೀಕ್ಷೆ ಬರೆದು ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನತೆಗೆ ತೀವ್ರ ಅನ್ಯಾಯವಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಹೀಗಾಗಿ ಸಂತ್ರಸ್ತರ ಕುಟುಂಬಗಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಮುಂದಾಗಿದ್ದ ತಮಿಳುನಾಡು ಸರ್ಕಾರದ ಕ್ರಮಕ್ಕೆ ಕಾನೂನಾತ್ಮಕ ತಡೆ ಬಿದ್ದಂತಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್ 27 ರಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಹಾಗೂ ಹಾಲಿ ಮುಖ್ಯಮಂತ್ರಿ ವಿಜಯ್ ಅವರ ಬೃಹತ್ ರ್‍ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆ ಮುಂದುವರಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಹಾಗೂ ಪುನರ್ವಸತಿ ಕಲ್ಪಿಸುವ ಭಾಗವಾಗಿ ಈ ತಿಂಗಳ ಆರಂಭದಲ್ಲಿ ಕರೂರ್‌ಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ವಿಜಯ್, ಮೃತರ 32 ವಾರಸುದಾರರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರಗಳನ್ನು ವಿತರಿಸಿದ್ದರು.

ಸರ್ಕಾರದ ಈ ನಿರ್ಧಾರವನ್ನು ಪ್ರತಿಪಕ್ಷ ಎಐಎಡಿಎಂಕೆ (AIADMK) ತೀವ್ರವಾಗಿ ಖಂಡಿಸಿತ್ತು. ತಮಿಳುನಾಡಿನಲ್ಲಿ ಸರ್ಕಾರಿ ಹುದ್ದೆಗಳನ್ನು ಕೇವಲ ಟಿಎನ್‌ಪಿಎಸ್‌ಸಿ (TNPSC) ಮೂಲಕವೇ ಭರ್ತಿ ಮಾಡಬೇಕು, ರಾಜಕೀಯ ಲಾಭಕ್ಕಾಗಿ ಉದ್ಯೋಗಗಳನ್ನು ಪರಿಹಾರವಾಗಿ ನೀಡುವುದು ಯುವಜನತೆಗೆ ಮಾಡುವ ದ್ರೋಹ ಎಂದು ಎಐಎಡಿಎಂಕೆ ನಾಯಕ ಆರ್‌.ಬಿ. ಉದಯಕುಮಾರ್ ಆರೋಪಿಸಿದ್ದರು. ಇದೀಗ ಮದ್ರಾಸ್ ಹೈಕೋರ್ಟ್ ಈ ನೇಮಕಾತಿ ಆದೇಶಗಳನ್ನು ರದ್ದುಗೊಳಿಸಿರುವುದರಿಂದ ಸಿಎಂ ವಿಜಯ್ ನೇತೃತ್ವದ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.

Category
ಕರಾವಳಿ ತರಂಗಿಣಿ