image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

35 ದಿನ ಊಟ ನೀಡಿದ್ದ ಮೊಹಮ್ಮದ್ ಜುನೈದ್‌ಗೆ ಕಡೆಗಣನೆ: ಸಿಜೆಪಿ ನಾಯಕರ ವಿರುದ್ಧ ಆಕ್ರೋಶ

35 ದಿನ ಊಟ ನೀಡಿದ್ದ ಮೊಹಮ್ಮದ್ ಜುನೈದ್‌ಗೆ ಕಡೆಗಣನೆ: ಸಿಜೆಪಿ ನಾಯಕರ ವಿರುದ್ಧ ಆಕ್ರೋಶ

ನವದೆಹಲಿ : ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಸಿಜೆಪಿ ಚಳವಳಿಯ ವೇಳೆ ಸತತ 35 ದಿನಗಳ ಕಾಲ ಧರಣಿನಿರತರಿಗೆ ಉಚಿತವಾಗಿ ಆಹಾರ ವಿತರಿಸಿದ್ದ ಮೊಹಮ್ಮದ್ ಜುನೈದ್, ಇದೀಗ ಸಿಜೆಪಿ ನಾಯಕತ್ವದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹೋರಾಟ ಯಶಸ್ವಿಯಾಗಿ ಮುಗಿದ ನಂತರ ಸಿಜೆಪಿ ನಾಯಕರು ತಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಕನಿಷ್ಠ ಸಂಪರ್ಕದಲ್ಲೂ ಇಲ್ಲ ಎಂದು ಜುನೈದ್ ಇತ್ತೀಚಿನ ಸಂದರ್ಶನವೊಂದರಲ್ಲಿ ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಅವರು, "ನನ್ನನ್ನು ಸಿಜೆಪಿ ನಾಯಕರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಅವರು ನನ್ನೊಂದಿಗೆ ಕನಿಷ್ಠ ಮಾತನಾಡುವ ಸೌಜನ್ಯವನ್ನೂ ತೋರಿಸುತ್ತಿಲ್ಲ. ನಾವೇನಾದರೂ ಒಂದು ಸಾಕುಪ್ರಾಣಿಯನ್ನು 24 ಗಂಟೆ ನಮ್ಮ ಜೊತೆ ಇಟ್ಟುಕೊಂಡರೂ ಅದರ ಮೇಲೆ ಕಾಳಜಿ ಮತ್ತು ಪ್ರೀತಿ ಬರುತ್ತದೆ. ಆದರೆ, ನಾನು ಒಬ್ಬ ಮನುಷ್ಯನಾಗಿ ಅವರ ಜೊತೆ 35 ದಿನಗಳ ಕಾಲ ಇದ್ದೆ, ಅವರಿಗೆ ಪ್ರೀತಿಯಿಂದ ಉಚಿತವಾಗಿ ಊಟ ಹಾಕಿದೆ..." ಎಂದು ನಾಯಕರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಧರಣಿ ಕುಳಿತಿದ್ದ ಸಾವಿರಾರು ವಿದ್ಯಾರ್ಥಿಗಳು, ಹೋರಾಟಗಾರರು ಹಾಗೂ ನಾಯಕರಿಗೆ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಸತತ 35 ದಿನಗಳ ಕಾಲ ಜುನೈದ್ ಮತ್ತು ಅವರ ತಂಡ ಉಚಿತವಾಗಿ ಆಹಾರ ವಿತರಣೆ ಮಾಡಿತ್ತು. ಆದರೆ ಸಚಿವರ ರಾಜೀನಾಮೆ ಹಾಗೂ ಹೋರಾಟದ ಗೆಲುವಿನ ನಂತರ ಸಿಜೆಪಿ ನಾಯಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಪ್ರತಿಭಟನೆಗೆ ಬೆನ್ನೆಲುಬಾಗಿ ನಿಂತ ಕಾರ್ಯಕರ್ತರು ಹಾಗೂ ಸೇವಕರನ್ನು ಕಡೆಗಣಿಸಲಾಗಿದೆ ಎಂಬ ಸತ್ಯ ಜುನೈದ್ ಅವರ ಹೇಳಿಕೆಯಿಂದ ಬಹಿರಂಗವಾಗಿದೆ. ಜುನೈದ್ ಅವರ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಷ್ಟದ ಸಮಯದಲ್ಲಿ ಊಟ ಹಾಕಿ ನೆರವಾದವರನ್ನು, ಹೋರಾಟ ಮುಗಿದ ತಕ್ಷಣ ಮರೆತುಬಿಡುವುದು ನಾಯಕರ ಸ್ವಾರ್ಥತನವನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ಕಟುವಾಗಿ ಟೀಕಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ