ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಧ್ವನಿಯೆತ್ತಿ ಹೋರಾಟ ನಡೆಸಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಘಟನೆಯ ಫಂಡಿಂಗ್ ಕುರಿತಾಗಿ ಖ್ಯಾತ ವಕೀಲ ಮಹೇಶ್ ಜೇಠ್ಮಲಾನಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬಳಿಕ ಸಿಜೆಪಿ ನಾಯಕರು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿರುವ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಅವರು ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜೇಠ್ಮಲಾನಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಸೇರಿದಂತೆ ಹಲವು ಪ್ರಮುಖರು ಬಾಲಿವುಡ್ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿರುವುದು ಕಂಡುಬಂದಿದೆ. ದೆಹಲಿಯಲ್ಲಿ ಹಲವು ದಿನಗಳ ಕಾಲ ನಡೆದ ಪ್ರತಿಭಟನೆಯ ಬೆನ್ನಲ್ಲೇ ಈ ರೀತಿ ಅದ್ಧೂರಿ ಪಾರ್ಟಿ ಆಯೋಜಿಸಲು ಹಣ ಎಲ್ಲಿಂದ ಬಂತು ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಬೃಹತ್ ಹೋರಾಟ, ನಾಯಕರು ಹಾಗೂ ಕಾರ್ಯಕರ್ತರ ಪ್ರಯಾಣ, ಸಮಯಕ್ಕೆ ಸರಿಯಾಗಿ ಆಹಾರದ ವ್ಯವಸ್ಥೆ, ತಂಗಲು ಹೋಟೆಲ್ ರೂಂಗಳು ಸೇರಿದಂತೆ ಇಡೀ ಪ್ರತಿಭಟನೆಗೆ ಹಣದ ಮೂಲ ಯಾವುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪಾರ್ಟಿಯ ವಿಡಿಯೋ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. "ಹಗಲಿರುಳು ಹೋರಾಟ ಮಾಡಿ ಕೊನೆಗೆ ಸಿಕ್ಕ ಗೆಲುವನ್ನು ಸಂಭ್ರಮಿಸುವುದರಲ್ಲಿ ತಪ್ಪೇನಿದೆ?" ಎಂದು ಸಿಜೆಪಿ ಬೆಂಬಲಿಗರು ಸಮರ್ಥಿಸಿಕೊಂಡಿದ್ದರೆ, ಗೆಲುವು ಸಂಭ್ರಮಿಸುವುದು ತಪ್ಪಲ್ಲ, ಆದರೆ ಇಷ್ಟೊಂದು ದೊಡ್ಡ ಮಟ್ಟದ ಹೋರಾಟಕ್ಕೆ ಬಂದ ಫಂಡಿಂಗ್ ಮೂಲ ಯಾವುದು ಎನ್ನುವ ಜೇಠ್ಮಲಾನಿ ಅವರ ಪ್ರಶ್ನೆ ಸಮಂಜಸವಾಗಿದೆ ಎಂದು ಮತ್ತಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.