image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಾಲಿಯಲ್ಲಿ ಅಪಹರಿಸಲಾಗಿದ್ದ ಭಾರತೀಯ ಉದ್ಯಮಿ ಬಿಡುಗಡೆ: ₹44 ಕೋಟಿ ಪಾವತಿಸಿದ ಕುಟುಂಬ

ಮಾಲಿಯಲ್ಲಿ ಅಪಹರಿಸಲಾಗಿದ್ದ ಭಾರತೀಯ ಉದ್ಯಮಿ ಬಿಡುಗಡೆ: ₹44 ಕೋಟಿ ಪಾವತಿಸಿದ ಕುಟುಂಬ

ಮಾಲಿ : ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ಮೂಲದ 75 ವರ್ಷದ ಪ್ರಮುಖ ವಜ್ರೋದ್ಯಮಿ ಧೀರೂ ರಮಣಿ ಕೊನೆಗೂ ಸಶಸ್ತ್ರ ಅಪಹರಣಕಾರರ ಬಂಧನದಿಂದ ಬಿಡುಗಡೆಯಾಗಿದ್ದಾರೆ. ಉದ್ಯಮಿಯನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಅವರ ಕುಟುಂಬಸ್ಥರು ಅಪಹರಣಕಾರರಿಗೆ ಬರೋಬ್ಬರಿ 4 ಮಿಲಿಯನ್ ಯುರೋ (ಸುಮಾರು 44 ಕೋಟಿ ರೂಪಾಯಿ) ನೀಡಿದ್ದಾರೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಮಾಡಿದೆ. ಈ ಆಘಾತಕಾರಿ ಘಟನೆಯಿಂದ ಇಡೀ ವಜ್ರೋದ್ಯಮ ಕ್ಷೇತ್ರವೇ ತಲ್ಲಣಗೊಂಡಿದೆ.

ಮೂಲತಃ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಧಾರಾ ಗ್ರಾಮದವರಾದ ಧೀರೂ ರಮಣಿ, 1980ರ ದಶಕದಿಂದಲೂ ಸೂರತ್‌ನ ವಜ್ರದ ವ್ಯಾಪಾರದಲ್ಲಿ ಸಕ್ರಿಯರಾಗಿದ್ದರು. ತದನಂತರ ಅಮೆರಿಕಕ್ಕೆ ಸ್ಥಳಾಂತರಗೊಂಡ ಅವರ ಕುಟುಂಬ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ವಜ್ರದ ಉದ್ಯಮವನ್ನು ನಡೆಸಿಕೊಂಡು ಬರುತ್ತಿದೆ. ಇತ್ತೀಚೆಗೆ ಮಾಲಿಯಲ್ಲಿ ಚಿನ್ನದ ಗಣಿಯೊಂದನ್ನು ಖರೀದಿಸಿದ್ದ ರಮಣಿ, ಉದ್ಯಮದ ನಿಮಿತ್ತ ಕಳೆದ ಕೆಲವು ಸಮಯದಿಂದ ಅಲ್ಲೇ ವಾಸಿಸುತ್ತಿದ್ದರು. ಈ ವೇಳೆ, ಕಳೆದ ಏಪ್ರಿಲ್ ತಿಂಗಳಲ್ಲಿ ಸಶಸ್ತ್ರ ದುಷ್ಕರ್ಮಿಗಳ ಗುಂಪೊಂದು ಅವರನ್ನು ಅಪಹರಿಸಿತ್ತು.

ಆರಂಭದಲ್ಲಿ ದುಷ್ಕರ್ಮಿಗಳು ರಮಣಿ ಅವರ ಬಿಡುಗಡೆಗಾಗಿ ಭಾರಿ ಪ್ರಮಾಣದ, ಅಂದರೆ ಸುಮಾರು 100 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಒಡ್ಡಿದ್ದರು. ಆದರೆ, ಅಮೆರಿಕದಲ್ಲಿ ನೆಲೆಸಿರುವ ರಮಣಿ ಅವರ ಕುಟುಂಬಸ್ಥರು ಅಪಹರಣಕಾರರೊಂದಿಗೆ ಸತತ ಸಂಧಾನ ನಡೆಸಿ, ಕೊನೆಗೆ ಬಿಡುಗಡೆ ಮೊತ್ತವನ್ನು 44 ಕೋಟಿ ರೂಪಾಯಿಗೆ ಇಳಿಸುವಲ್ಲಿ ಯಶಸ್ವಿಯಾದರು. ಕಳೆದ ವಾರ ಕುಟುಂಬಸ್ಥರು ನಿಗದಿತ ಹಣವನ್ನು ಪಾವತಿಸಿದ ಬಳಿಕವೇ ಅಪಹರಣಕಾರರು ರಮಣಿ ಅವರನ್ನು ಮುಕ್ತಗೊಳಿಸಿದ್ದಾರೆ. ಇಡೀ ಸಂಧಾನ ಪ್ರಕ್ರಿಯೆಯನ್ನು ರಮಣಿ ಕುಟುಂಬವೇ ಸ್ವತಃ ನಡೆಸಿದ್ದು, ಇದರಲ್ಲಿ ಯಾವುದೇ ಭಾರತೀಯ ಸರ್ಕಾರಿ ಸಂಸ್ಥೆಗಳು ಭಾಗಿಯಾಗಿರಲಿಲ್ಲ.

ಬಿಡುಗಡೆಯಾಗಿದ್ದರೂ ಧೀರೂ ರಮಣಿ ಅವರು ಸದ್ಯ ಮಾಲಿಯಲ್ಲೇ ಉಳಿದುಕೊಂಡಿದ್ದಾರೆ. ಅಪಹರಣ ನಡೆದ ಸಂದರ್ಭಗಳು ಮತ್ತು ಬಿಡುಗಡೆಯ ಹಿಂದಿನ ಪ್ರಕ್ರಿಯೆಗಳ ಕುರಿತು ಅಲ್ಲಿನ ಸ್ಥಳೀಯ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸುತ್ತಿವೆ. ಇನ್ನು ಅಪಹರಣ ನಡೆದ ಏಪ್ರಿಲ್ ಅವಧಿಯಲ್ಲೇ ಮಾಲಿಯ ರಾಜಧಾನಿ ಬಮಾಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಜಾಗರೂಕತೆಯಿಂದಿರುವಂತೆ ಭದ್ರತಾ ಸಲಹೆ ನೀಡಿತ್ತು. ಪ್ರಮುಖ ಪ್ರದೇಶಗಳಲ್ಲಿ ನಿರಂತರ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿತ್ತಾದರೂ, ಆ ಪ್ರಕಟಣೆಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಅಪಹರಣದ ಉಲ್ಲೇಖವಿರಲಿಲ್ಲ.

Category
ಕರಾವಳಿ ತರಂಗಿಣಿ