ನವದೆಹಲಿ : ಎನ್‌ಟಿಎ ನಡೆಸಿದ್ದ ನೀಟ್ ಪರೀಕ್ಷೆಯ ಅಕ್ರಮವನ್ನು ಖಂಡಿಸಿ ‘ಕಾಕ್ರೋಜ್ ಜನತಾ ಪಾರ್ಟಿ’ (CJP) ನಡೆಸಿದ ಒಂದು ತಿಂಗಳ ತೀವ್ರ ಹೋರಾಟದ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಹೋರಾಟದ ಯಶಸ್ಸಿನ ಬೆನ್ನಲ್ಲೇ, ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ಪಶು ವೈದ್ಯಾಧಿಕಾರಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಅಲ್ಲಿಯೂ ಹೋರಾಟ ನಡೆಸಿ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಪಂಜಾಬ್‌ನಲ್ಲಿಯೂ ಪ್ರತಿಭಟನೆ ನಡೆಸುವಂತೆ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯಿಸಿರುವ ಕಾಕ್ರೋಜ್ ಜನತಾ ಪಾರ್ಟಿಯ ಸ್ಥಾಪಕ ಅಭಿಜಿತ್ ದೀಪ್ಕೆ, "ನಮಗೆ ಸ್ವಲ್ಪ ಸಮಯಾವಕಾಶ ನೀಡಿ, ಪಂಜಾಬ್‌ನಲ್ಲಿಯೂ ಹೋರಾಟ ನಡೆಸಲು ನಾವು ಅಗತ್ಯ ಯೋಜನೆಯನ್ನು ರೂಪಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಈ ಆರೋಪಗಳನ್ನು ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಭಗವಂತ್ ಮಾನ್, "ನಮ್ಮ ರಾಜ್ಯದಲ್ಲಿ ಯಾವುದೇ ಪೇಪರ್ ಸೋರಿಕೆ ನಡೆದಿಲ್ಲ. ನಮ್ಮ ಸರ್ಕಾರ ಕಳೆದ 4.5 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಅಕ್ರಮ ನಡೆದಿಲ್ಲ. ಎರಡು ಪರೀಕ್ಷಾ ಕೇಂದ್ರಗಳಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಲು ಮುಂದಾದ ಕೆಲವು ವ್ಯಕ್ತಿಗಳನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಆದರೆ ಇದನ್ನು ಪೇಪರ್ ಸೋರಿಕೆ ಎಂದು ಬಿಂಬಿಸಿ ನಮ್ಮ ಸರ್ಕಾರ ಹಾಗೂ ರಾಜ್ಯಕ್ಕೆ ಕಳಂಕ ತರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪೇಯ್ಡ್ ಪ್ರಮೋಷನ್ ನಡೆಸುತ್ತಿವೆ" ಎಂದು ಆರೋಪಿಸಿದ್ದಾರೆ.