ನವದೆಹಲಿ : ನದಿ ನೀರು ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದಲ್ಲಿ ಉದ್ದೇಶಪೂರ್ವಕವಾಗಿ ಪ್ರವಾಹ ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇವೆಲ್ಲವೂ ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದ ಸಂಗತಿಗಳು ಎಂದು ಸ್ಪಷ್ಟಪಡಿಸಿದೆ. ಜುಲೈ 20 ರಿಂದ 23 ರ ಅವಧಿಯಲ್ಲಿ ಜಮ್ಮು ಮತ್ತು ಸುತ್ತಮುತ್ತಲಿನ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮವಾಗಿ ಚೆನಾಬ್ ನದಿಯಲ್ಲಿ ನೈಸರ್ಗಿಕವಾಗಿ ನೀರಿನ ಹರಿವು ಹೆಚ್ಚಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಲಾಹೋರ್‌ನಲ್ಲಿರುವ ಪಾಕಿಸ್ತಾನದ ಪ್ರವಾಹ ಮುನ್ಸೂಚನಾ ವಿಭಾಗವು ಹೊರಡಿಸಿದ ವರದಿಯಲ್ಲೂ ಮೇಲ್ಭಾಗದ ಜಲಾನಯನ ಪ್ರದೇಶದ ಭಾರಿ ಮಳೆಯೇ ಪ್ರವಾಹಕ್ಕೆ ಕಾರಣ ಎಂದು ಉಲ್ಲೇಖಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ನದಿಯ ಹರಿವಿನಲ್ಲಿ ಉಂಟಾಗಿರುವ ಈ ಏರಿಕೆಯು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಭಾರತದ ಯಾವುದೇ ಕ್ರಮವಿಲ್ಲ. ಹವಾಮಾನ ವೈಪರೀತ್ಯದಿಂದ ಸಂಭವಿಸಿದ ನೈಸರ್ಗಿಕ ಘಟನೆಯನ್ನು ಭಾರತದ ಹಸ್ತಕ್ಷೇಪವೆಂದು ಬಿಂಬಿಸಲು ಯತ್ನಿಸುವುದು ವಾಸ್ತವಿಕವಾಗಿ ತಪ್ಪು, ತಾಂತ್ರಿಕವಾಗಿ ಸಮರ್ಥನೀಯವಲ್ಲ ಹಾಗೂ ಸ್ವತಃ ಪಾಕಿಸ್ತಾನದ ಅಧಿಕೃತ ಪ್ರವಾಹ ಸಲಹಾ ಸಂಸ್ಥೆಯ ವರದಿಗೇ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.