image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್ ಗಾಂಧಿ ಆಗ್ರಹ

ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್ ಗಾಂಧಿ ಆಗ್ರಹ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ತಕ್ಷಣವೇ ವಜಾಗೊಳಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಮುಖಂಡರೊಂದಿಗೆ 10 ಜನಪತ್ ಹೊರಗೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಸಚಿವರ ರಾಜೀನಾಮೆ ಪಡೆದು ಬೇರೆ ಸಚಿವಾಲಯಕ್ಕೆ ವರ್ಗಾಯಿಸುವ ಸರ್ಕಾರದ ಆಂತರಿಕ ಆಲೋಚನೆಯನ್ನು ತೀವ್ರವಾಗಿ ಖಂಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ "ಸ್ನೇಹಿತ" ಧರ್ಮೇಂದ್ರ ಪ್ರಧಾನ್ ಅವರನ್ನು ಮತ್ತೊಂದು ಸಚಿವಾಲಯಕ್ಕೆ ಬದಲಾಯಿಸಿ ರಕ್ಷಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಈ ನಡೆ ದೇಶದ ಯುವಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಎಂದಿಗೂ ಸ್ವೀಕಾರಾರ್ಹವಲ್ಲ ಎಂದರು. ಧರ್ಮೇಂದ್ರ ಪ್ರಧಾನ್ ಅವರು ಭ್ರಷ್ಟಾಚಾರ ಹಾಗೂ ದೇಶದ ಶಿಕ್ಷಣ ವ್ಯವಸ್ಥೆಯ ವಿನಾಶದ ಸಂಕೇತವಾಗಿದ್ದಾರೆ. ಅನೇಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲು ಮತ್ತು ಅವರ ಸಾವಿಗೆ ಅವರೇ ನೇರ ಹೊಣೆಗಾರರಾಗಿದ್ದಾರೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಅವರ ಕೈಯಲ್ಲಿ ಯಾರದೇ ಜೀವನ ಹಾಳಾಗಲು ಬಿಡುವುದಿಲ್ಲ, ಅವರನ್ನು ಸಂಪುಟದಿಂದ ವಜಾ ಮಾಡಲೇಬೇಕು ಎಂದು ಎಚ್ಚರಿಸಿದರು.

ಪ್ರಧಾನಿಯವರ ಇತ್ತೀಚಿನ ವಿಡಿಯೋ ಸಂದೇಶಗಳನ್ನು ವ್ಯಂಗ್ಯವಾಡಿದ ಅವರು, ಪ್ರಧಾನಿಯವರು ಇತ್ತೀಚೆಗೆ ರಾತ್ರಿ ವೇಳೆ ವಿಡಿಯೋಗಳನ್ನು ಮಾಡಲು ಬ್ಯುಸಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ಭರವಸೆಗಳು ಅಥವಾ ವಿಡಿಯೋ ಸಂದೇಶಗಳು ಬೇಕಾಗಿಲ್ಲ, ಅವರಿಗೆ ಕೆಲಸ ಮತ್ತು ಕಟ್ಟುನಿಟ್ಟಿನ ಕ್ರಮ ಬೇಕಾಗಿದೆ ಎಂದು ಹೇಳಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇಟ್ಟಿರುವ ಮೂರು ಪ್ರಮುಖ ಬೇಡಿಕೆಗಳು ರಾಜಿಗೆ ಅವಕಾಶವಿಲ್ಲದಷ್ಟು ಸ್ಪಷ್ಟವಾಗಿವೆ ಎಂದರು.

ದೇಶದ ಯುವಜನತೆಯೇ ಭಾರತದ ನಿಜವಾದ ಭವಿಷ್ಯ. ನರೇಂದ್ರ ಮೋದಿ ಅವರು ಭಾರತದ ಭೂತಕಾಲವಾಗಿದ್ದು, ಭವಿಷ್ಯದ ಶಕ್ತಿಯಾಗಿರುವ ಯುವ ವಿದ್ಯಾರ್ಥಿಗಳೊಂದಿಗೆ ಅವರು ಹೋರಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಭ್ರಷ್ಟ ಹಾಗೂ ಅಸಮರ್ಥ ಶಿಕ್ಷಣ ಸಚಿವರನ್ನು ಮೊದಲು ವಜಾಗೊಳಿಸುವುದೇ ವಿದ್ಯಾರ್ಥಿಗಳ ಮೊದಲ ಬೇಡಿಕೆಯಾಗಿದ್ದು, ಸರ್ಕಾರ ತಕ್ಷಣವೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರದ ವಿರುದ್ಧ ಗುಡುಗಿದರು.

Category
ಕರಾವಳಿ ತರಂಗಿಣಿ