ಅಸ್ಸಾಂ : ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿದ್ದು, ಪ್ರವಾಹದ ಭೀಕರತೆಗೆ ಒಂದೇ ದಿನದಲ್ಲಿ 21 ಜನರು ಜೀವ ಕಳೆದುಕೊಂಡಿದ್ದಾರೆ. ರಾಜ್ಯದ 16 ಜಿಲ್ಲೆಗಳಲ್ಲಿ ಸುಮಾರು 5.64 ಲಕ್ಷ ಮಂದಿ ಪ್ರವಾಹದ ಹೊಡೆತಕ್ಕೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ (ASDMA) ತನ್ನ ಅಧಿಕೃತ ಬುಲೆಟಿನ್‌ನಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಶಿವಸಾಗರ ಜಿಲ್ಲೆಯೊಂದರಲ್ಲೇ ಗರಿಷ್ಠ 13 ಮಂದಿ ಬಲಿಯಾಗಿದ್ದು, ಛರೈಡಿಯೋದಲ್ಲಿ ಐವರು, ಗೋಲಾಘಾಟ್‌ನಲ್ಲಿ ಇಬ್ಬರು ಮತ್ತು ಜೋರ್‌ಹತ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ವರ್ಷ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹ ಸಂಬಂಧಿತ ದುರಂತಗಳಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಮೇಘಸ್ಫೋಟದ ಪರಿಣಾಮ ರಾಜ್ಯದಲ್ಲಿ ಈ ದುರಂತ ಸಂಭವಿಸಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಬುಧವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಛರೈಡಿಯೋ, ನಾಝಿರಾ, ಶಿವಸಾಗರ, ಸೋನಾರಿ, ಜೋರ್‌ಹತ್ ಮತ್ತು ತಿಯೋಕ್ ಜಿಲ್ಲೆಗಳಿಗೆ ತೆರಳಿ, ಸಂತ್ರಸ್ತರ ಸ್ಥಿತಿಗತಿ ಹಾಗೂ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ.