image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಿಹಾರ್ ಜೈಲಿನಲ್ಲಿರುವ ಅಮೆರಿಕನ್ ಪ್ರಜೆಗೆ ವಿಶೇಷ ಆಹಾರ ವ್ಯವಸ್ಥೆ: ಬಿಗ್ ರಿಲೀಫ್

ತಿಹಾರ್ ಜೈಲಿನಲ್ಲಿರುವ ಅಮೆರಿಕನ್ ಪ್ರಜೆಗೆ ವಿಶೇಷ ಆಹಾರ ವ್ಯವಸ್ಥೆ: ಬಿಗ್ ರಿಲೀಫ್

ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿರುವ ಭಯೋತ್ಪಾದನೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲು ಸೇರಿರುವ ಅಮೆರಿಕನ್ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್‌ಗೆ ದೆಹಲಿ ಕೋರ್ಟ್ ಕೊನೆಗೂ ದೊಡ್ಡ ರಿಲೀಫ್ ನೀಡಿದೆ. ಜೈಲಿನಲ್ಲಿ ನೀಡಲಾಗುವ ಮಸಾಲೆಯುಕ್ತ ಹಾಗೂ ಎಣ್ಣೆಯುಕ್ತ ಊಟ ತಿನ್ನಲು ಸಾಧ್ಯವಾಗದೆ ಆರೋಗ್ಯ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಕೂತಿದ್ದ ಈತನ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ, ಮಾನವೀಯತೆ ಮತ್ತು ವೈದ್ಯಕೀಯ ಆಧಾರದ ಮೇಲೆ ವಿಶೇಷ ಆಹಾರ ವ್ಯವಸ್ಥೆಗೆ ಅನುಮತಿ ನೀಡಿದೆ.

ತಿಹಾರ್‌ನಲ್ಲಿರುವ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಪರ ವಕೀಲರಾದ ರೋಹಿತ್ ದಾಂಡ್ರಿಯಾಲ್ ಮತ್ತು ರೋಹಿತ್ ಗೌರ್ ಅವರು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಈ ಕುರಿತು ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿ ಪ್ರತಿದಿನ ನೀಡುವ ಸಾಮಾನ್ಯ ಆಹಾರವು ಅತ್ಯಂತ ಖಾರ, ಎಣ್ಣೆಯುಕ್ತ ಮತ್ತು ಜಿಡ್ಡಿನಿಂದ ಕೂಡಿದೆ. ಇದರಿಂದಾಗಿ ವ್ಯಾನ್‌ಡೈಕ್‌ಗೆ ತೀವ್ರ ದೈಹಿಕ ಅಸ್ವಸ್ಥತೆ ಎದುರಾಗಿದ್ದು, ಜೈಲಿನ ಊಟ ಇತನಿಗೆ ಸರಿಹೊಂದದ ಕಾರಣ ಅನಿವಾರ್ಯವಾಗಿ ಮೇ 6ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಯಿತು ಎಂದು ಕೋರ್ಟ್‌ಗೆ ತಿಳಿಸಿದರು. ಸುದೀರ್ಘ ಉಪವಾಸದಿಂದಾಗಿ ಆತನ ದೇಹದ ತೂಕ ಬರೋಬ್ಬರಿ 14 ಕೆಜಿ ಇಳಿಕೆಯಾಗಿದೆ. ಅಷ್ಟೇ ಅಲ್ಲದೆ, ಸರಿಯಾದ ಪೋಷಕಾಂಶಗಳು ಸಿಗದೆ ಕಣ್ಣಿನ ದೃಷ್ಟಿ ಸಮಸ್ಯೆ ಶುರುವಾಗಿದ್ದು ಮತ್ತು ರೋಗನಿರೋಧಕ ಶಕ್ತಿ ಸಂಪೂರ್ಣ ಕುಸಿದಿದೆ ಎಂದು ವಕೀಲರು ನ್ಯಾಯಾಧೀಶರ ಮುಂದೆ ತಮ್ಮ ವಾದ ಮಂಡಿಸಿದರು.

ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಗೂ ಇದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೂ ಮಾನವೀಯ ಘನತೆಯಿಂದ ಬದುಕುವ ಹಕ್ಕಿದೆ ಎಂದು ವಾದಿಸಿದ ವಕೀಲರು, ಆತನ ದೇಹಕ್ಕೆ ಒಪ್ಪುವಂತಹ ವಿಶೇಷ ಆಹಾರ ಮತ್ತು ಊಟ ತಯಾರಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಈ ಆಹಾರ ಸಾಮಗ್ರಿಗಳು, ಅಡುಗೆ ಸಲಕರಣೆ ಹಾಗೂ ಬೇಕಾಗುವ ಎಲ್ಲಾ ವೆಚ್ಚಗಳನ್ನು ವ್ಯಾನ್‌ಡೈಕ್ ಕುಟುಂಬವೇ ಭರಿಸಲಿದೆ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಈ ಪರಿಹಾರ ಕಲ್ಪಿಸಿದೆ.

Category
ಕರಾವಳಿ ತರಂಗಿಣಿ