ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ನ ಉನ್ನತ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್, ಪವನ್ ಖೇರಾ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರು ಲೋಕ್ ಕಲ್ಯಾಣ್ ಮಾರ್ಗದಲ್ಲಿ ಧರಣಿ ಕುಳಿತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಮುಂದೆ ಆರು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ:
* ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು.
* ಸಂಸತ್ತಿನಲ್ಲಿ ನೀಟ್ (NEET) ಪರೀಕ್ಷಾ ಅಕ್ರಮದ ಕುರಿತು ತಕ್ಷಣವೇ ಚರ್ಚೆ ನಡೆಸಬೇಕು.
* ಜಂತರ್ ಮಂತರ್‌ನಿಂದ ಸಂಸತ್ತಿಗೆ ಹೊರಟಿದ್ದ ವಿದ್ಯಾರ್ಥಿಗಳ ಮೆರವಣಿಗೆಯ ಮೇಲಿನ ಲಾಠಿಚಾರ್ಜ್ ಕುರಿತು ಗೃಹ ಸಚಿವರು ಸೋಮವಾರ ಸದನದಲ್ಲಿ ಸ್ಪಷ್ಟನೆ ನೀಡಬೇಕು.
* ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಘಟನೆಯ ಕುರಿತು ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖೆಯಾಗಬೇಕು.
* ಗಾಯಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು.
* ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು.
ಈ ನಡುವೆ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಸರ್ಕಾರದ ಪ್ರತಿನಿಧಿಗಳು ಹಾಗೂ ರಾಹುಲ್ ಗಾಂಧಿ ನಡುವೆ ನಡೆದ ಪ್ರಾಥಮಿಕ ಮಾತುಕತೆ ವಿಫಲವಾಗಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಸೋಮವಾರ ಸಂಸತ್ತಿನಲ್ಲಿ ನೀಟ್ ವಿಚಾರದ ಕುರಿತು ಚರ್ಚಿಸಲು ಸರ್ಕಾರ ಸಮ್ಮತಿಸಿದೆ. ಆದರೆ, ಶಿಕ್ಷಣ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿದ್ದು ಪ್ರತಿಭಟನೆ ಮುಂದುವರಿಸಿದೆ. ಇದಕ್ಕೂ ಮುನ್ನ ವಿರೋಧ ಪಕ್ಷದ ಸಂಸದರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ, ದೇಶದ ಪರೀಕ್ಷಾ ವ್ಯವಸ್ಥೆಯು ಸಂಪೂರ್ಣವಾಗಿ ನಶಿಸಿಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಪ್ರಧಾನಿಯವರು ಕ್ಷಮೆಯಾಚಿಸಬೇಕು ಹಾಗೂ ಈ ಕುರಿತು ಪ್ರಧಾನಿ ಮೌನ ವಹಿಸಿರುವುದನ್ನು ಪ್ರಶ್ನಿಸುವುದಾಗಿ ಅವರು ತಿಳಿಸಿದ್ದಾರೆ.