ನವದೆಹಲಿ : ನೀಟ್ ಪರೀಕ್ಷೆ ಅಕ್ರಮಗಳ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿದ್ದ ಪ್ರತಿಭಟನೆ ವೇಳೆ ವಕ್ತಾರರೊಬ್ಬರು ಬರ್ಗರ್ ತಿನ್ನುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಲಾಗಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಹಮ್ಮಿಕೊಂಡಿದ್ದ 'ಸಂಸತ್ ಚಲೋ' ಪ್ರತಿಭಟನಾ ಮೆರವಣಿಗೆಯ ವೇಳೆ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದರು. ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿಗಳು ಪೊಲೀಸರ ಬಲಪ್ರಯೋಗಕ್ಕೆ ತತ್ತರಿಸಿದ್ದ ಸಂದರ್ಭದಲ್ಲೇ, ಸಿಜೆಪಿ ವಕ್ತಾರ ವಿಜೇತಾ ದಹಿಯಾ ಅವರು ಸಮೀಪದ ಮಾಲ್ ಒಂದರ ಬರ್ಗರ್ ಮಳಿಗೆಯಲ್ಲಿ ನಿಂತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಜೆಪಿ, ವಿಜೇತಾ ದಹಿಯಾ ಅವರ ವರ್ತನೆಯನ್ನು "ಸಂವೇದನಾರಹಿತ" ಮತ್ತು ಚಳುವಳಿಯ ತತ್ವಗಳಿಗೆ ಸಂಪೂರ್ಣ ವಿರುದ್ಧವಾದದ್ದು ಎಂದು ಬಣ್ಣಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಕ್ತಾರ ಹುದ್ದೆಯಿಂದ ತಕ್ಷಣವೇ ತೆಗೆದುಹಾಕಿ, ಪಕ್ಷದ ಎಲ್ಲಾ ಅಧಿಕೃತ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿದೆ. ವಿವಾದದ ಕುರಿತು ಸ್ಪಷ್ಟನೆ ನೀಡಿದ್ದ ದಹಿಯಾ, "ತಾವು ನಿರಂತರವಾಗಿ ಚಳುವಳಿಗಾಗಿ ಶ್ರಮಿಸುತ್ತಿದ್ದು, ಕಳೆದ ಎರಡು ರಾತ್ರಿಗಳಿಂದ ಸರಿಯಾಗಿ ನಿದ್ರೆ ಮಾಡಿರಲಿಲ್ಲ" ಎಂದು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಆ ಬರ್ಗರ್‌ನಲ್ಲಿ ಮೈದಾ ಮತ್ತು ಟ್ರಾನ್ಸ್-ಫ್ಯಾಟ್ಸ್ ಇದ್ದಿದ್ದರಿಂದ ಅದನ್ನು ತಿನ್ನಲಿಲ್ಲ ಎಂದೂ ವಿಡಿಯೋದಲ್ಲಿ ಹೇಳಿದ್ದರು. ಆದಾಗ್ಯೂ, ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಸಿಜೆಪಿ ಈ ಕಠಿಣ ಕ್ರಮ ಕೈಗೊಂಡಿದೆ.