image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ತೀವ್ರ: ಪ್ರಧಾನಿ ರಾಜೀನಾಮೆಗೆ ಸಿಜೆಪಿ ಆಗ್ರಹ

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ತೀವ್ರ: ಪ್ರಧಾನಿ ರಾಜೀನಾಮೆಗೆ ಸಿಜೆಪಿ ಆಗ್ರಹ

ನವದೆಹಲಿ : ಪರೀಕ್ಷಾ ಅಕ್ರಮ ಹಾಗೂ ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ 21ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ಹಿನ್ನೆಲೆಯಲ್ಲಿ ಈ ಹಿಂದೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಹಾಗೂ ಸರ್ಕಾರದ ಉತ್ತರದಾಯಿತ್ವಕ್ಕೆ ಆಗ್ರಹಿಸಿದ್ದ ಪ್ರತಿಭಟನಾಕಾರರು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಜೂನ್ 20ರಂದು ಆರಂಭವಾದ ಈ ಪ್ರತಿಭಟನೆಯಲ್ಲಿ ಪರಿಸರ ಹೋರಾಟಗಾರ ಸೊನಮ್‌ ವಾಂಗ್ಚೂಕ್‌ ಹಾಗೂ ಕೆಲವು ವಿದ್ಯಾರ್ಥಿಗಳು ಜೂನ್‌ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ವಾಂಗ್ಚೂಕ್‌ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈಕೋರ್ಟ್, ಅವರಿಗೆ ನಿಯಮಿತ ಆರೋಗ್ಯ ತಪಾಸಣೆ ನಡೆಸುವಂತೆ ಮತ್ತು ಅಗತ್ಯವಿದ್ದಲ್ಲಿ ವೈದ್ಯಕೀಯ ನೆರವು ನೀಡುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ವಾಂಗ್ಚೂಕ್‌ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೆಹಲಿ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಸಚಿನ್ ಶರ್ಮಾ ತಿಳಿಸಿದ್ದಾರೆ.

ಆದರೆ, ವಾಂಗ್ಚೂಕ್‌ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಪಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಇದೀಗ ತಾವೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಎಕ್ಸ್ (ಟ್ವಿಟರ್) ತಾಣದ 'ಕಾಕ್ರೋಚ್‌ ಈಸ್‌ ಬ್ಯಾಕ್‌' ಖಾತೆಯಲ್ಲಿ 'ಪ್ರಧಾನಿ ರಾಜೀನಾಮೆ ನೀಡಬೇಕು' ಎಂಬ ಪೋಸ್ಟ್‌ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬೆಳಿಗ್ಗೆ 8.56ಕ್ಕೆ ಪ್ರಕಟವಾದ ಈ ಪೋಸ್ಟ್‌ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 9 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 2 ಸಾವಿರಕ್ಕೂ ಹೆಚ್ಚು ಜನರು ಮರುಹಂಚಿಕೆ (ರೀಟ್ವೀಟ್) ಮಾಡಿಕೊಂಡಿದ್ದಾರೆ. ಈ ಮಧ್ಯೆ, ಜೂನ್ 28ರಿಂದಲೇ ವಾಂಗ್ಚೂಕ್‌ ಅವರೊಂದಿಗೆ ಉಪವಾಸ ನಿರತರಾಗಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ನೇಹಾ, ಆಮೆನ್‌ ಮತ್ತು ಮನೀಷ್‌ ಜಂತರ್‌ ಮಂತರ್‌ನಲ್ಲೇ ತಂಗಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

Category
ಕರಾವಳಿ ತರಂಗಿಣಿ