image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸರಣಿ ರಾಜೀನಾಮೆಗೆ ಬ್ರೇಕ್: ಇಸ್ರೋ ವಿಜ್ಞಾನಿಗಳ ನಿರ್ಗಮನ ತಡೆಯಲು ಸರ್ಕಾರದಿಂದ ಕಠಿಣ ನಿಯಮ ಜಾರಿ!

ಸರಣಿ ರಾಜೀನಾಮೆಗೆ ಬ್ರೇಕ್: ಇಸ್ರೋ ವಿಜ್ಞಾನಿಗಳ ನಿರ್ಗಮನ ತಡೆಯಲು ಸರ್ಕಾರದಿಂದ ಕಠಿಣ ನಿಯಮ ಜಾರಿ!

ಬೆಂಗಳೂರು : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದಲ್ಲಿ (ISRO) ಇತ್ತೀಚಿನ ದಿನಗಳಲ್ಲಿ ಪ್ರಮುಖ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ವಿಜ್ಞಾನಿಗಳು ಸರಣಿಯಾಗಿ ರಾಜೀನಾಮೆ ನೀಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಗಗನಯಾನ ಸೇರಿದಂತೆ ಭಾರತದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಯೋಜನೆಗಳ ಯಶಸ್ಸಿಗೆ ಧಕ್ಕೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇಸ್ರೋ ವಿಜ್ಞಾನಿಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ (VRS) ಅರ್ಜಿಗಳ ಸಲ್ಲಿಕೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದಂತೆ ಬಾಹ್ಯಾಕಾಶ ಇಲಾಖೆಯು (Department of Space) ಹೊಸದಾದ ಮತ್ತು ಅತ್ಯಂತ ಕಠಿಣವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಳೆದ ಜುಲೈ 14ರಂದು ಬಾಹ್ಯಾಕಾಶ ಇಲಾಖೆ ಹೊರಡಿಸಿರುವ ಆಂತರಿಕ ಸುತ್ತೋಲೆಯ ಪ್ರಕಾರ, ಗಗನಯಾನದಂತಹ ಅತಿ ಪ್ರಮುಖ ಯೋಜನೆಗಳಲ್ಲಿ ರಾತ್ರಿ-ಹಗಲು ಶ್ರಮಿಸುತ್ತಿರುವ ಗ್ರೂಪ್-ಎ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿಯ ಅರ್ಜಿಗಳನ್ನು ಇನ್ನು ಮುಂದೆ ಸಾಮಾನ್ಯವಾಗಿ ಪರಿಗಣಿಸಬಾರದು ಅಥವಾ ತಕ್ಷಣಕ್ಕೆ ಅಂಗೀಕರಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಾಚರಣೆಗಳ ಸುಗಮ ಅನುಷ್ಠಾನಕ್ಕಾಗಿ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಾಹ್ಯಾಕಾಶ ಇಲಾಖೆಯು ಈವರೆಗೆ ಇಸ್ರೋ ತೊರೆದಿರುವ ವಿಜ್ಞಾನಿಗಳ ಅಧಿಕೃತ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಲಭ್ಯವಿರುವ ಮಾಹಿತಿಯ ಪ್ರಕಾರ ಇತ್ತೀಚಿನ ತಿಂಗಳುಗಳಲ್ಲಿ ಸುಮಾರು 100ರಿಂದ 120 ನುರಿತ ವಿಜ್ಞಾನಿಗಳು ಇಸ್ರೋಗೆ ಗುಡ್‌ಬೈ ಹೇಳಿದ್ದಾರೆ. ಇವರಲ್ಲಿ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ (URSC) ಸುಮಾರು 80 ಮಂದಿ ಹಾಗೂ ತಿರುವನಂತಪುರದ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಿಂದ (VSSC) ಸುಮಾರು 20 ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಇನ್ನು ಹಲವಾರು ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. ಕೇವಲ ಸಿಬ್ಬಂದಿಯಷ್ಟೇ ಅಲ್ಲದೆ, ಪ್ರಮುಖ ಯೋಜನೆಗಳ ನೇತೃತ್ವ ವಹಿಸಿದ್ದ ಹಿರಿಯ ವಿಜ್ಞಾನಿಗಳೂ ಸಂಸ್ಥೆಯಿಂದ ಹೊರನಡೆದಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಎಲ್‌ವಿಎಂ-3 (LVM-3) ಯೋಜನೆಯ ನಿರ್ದೇಶಕರಾಗಿದ್ದ ವಿಕ್ಟರ್ ಜೋಸೆಫ್ ಹಾಗೂ ಸ್ಪಾಡೆಕ್ಸ್ (SpaDeX) ಯೋಜನೆಯ ನಿರ್ದೇಶಕ ಮತ್ತು ಚಂದ್ರಯಾನ-3 ಸಿಮ್ಯುಲೇಶನ್ ಯೋಜನಾ ವ್ಯವಸ್ಥಾಪಕರಾಗಿದ್ದ ಆದಿತ್ಯ ರಾಳ್ಳಪಲ್ಲಿ ಅವರಂತಹ ಪ್ರಮುಖರು ರಾಜೀನಾಮೆ ನೀಡಿದ್ದಾರೆ. ಚಂದ್ರಯಾನ-3 ಮಿಷನ್ ಯಶಸ್ಸಿನಲ್ಲಿ ಆದಿತ್ಯ ರಾಳ್ಳಪಲ್ಲಿ ಅವರ ಪಾತ್ರ ಅತ್ಯಂತ ದೊಡ್ಡದಾಗಿತ್ತು. ಚಂದ್ರನ ಮೇಲಿನ ಕಠಿಣ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸುಮಾರು 1 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿ, 25 ಟೆರಾಬೈಟ್‌ಗೂ ಅಧಿಕ ಡೇಟಾ ಸೃಷ್ಟಿಸಿದ ಹೆಗ್ಗಳಿಕೆ ಇವರ ನೇತೃತ್ವದ ತಂಡಕ್ಕಿದೆ.

ವಿಜ್ಞಾನಿಗಳ ಈ ದಿಢೀರ್ ರಾಜೀನಾಮೆಗಳ ಕುರಿತು ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು, ಯಾವುದೇ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗಿಗಳ ನಿರ್ಗಮನ ಮತ್ತು ಸೇರ್ಪಡೆ ಸಹಜ ಪ್ರಕ್ರಿಯೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಬ್ಬರು ಹೋದರೆ ಅವರ ಜವಾಬ್ದಾರಿಯನ್ನು ಮತ್ತೊಬ್ಬ ಸಮರ್ಥ ಅಧಿಕಾರಿಗೆ ವಹಿಸಲಾಗುತ್ತದೆ. ಇದರಿಂದ ದೇಶದ ಯಾವುದೇ ಪ್ರಮುಖ ಬಾಹ್ಯಾಕಾಶ ಯೋಜನೆಗಳಿಗೆ ತೊಂದರೆಯಾಗುವುದಿಲ್ಲ ಮತ್ತು ಎಲ್ಲವೂ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ಮಾರ್ಗಸೂಚಿಯು 2020ರಲ್ಲಿ ಜಾರಿಗೆ ತರಲಾಗಿದ್ದ ಆಡಳಿತಾತ್ಮಕ ಆದೇಶಗಳನ್ನು ರದ್ದುಗೊಳಿಸಿದೆ. ಈ ಹಿಂದಿನ ನಿಯಮಗಳ ಪ್ರಕಾರ, ಇಸ್ರೋ ಕೇಂದ್ರಗಳ ನಿರ್ದೇಶಕರು ಮತ್ತು ಘಟಕಗಳ ಮುಖ್ಯಸ್ಥರೇ ವಿಜ್ಞಾನಿ ಅಥವಾ ಇಂಜಿನಿಯರ್-ಎಸ್‌ಜಿ ಹಂತದವರೆಗಿನ ಗ್ರೂಪ್-ಎ ಅಧಿಕಾರಿಗಳ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿಯ ಅರ್ಜಿಗಳನ್ನು ಅನುಮೋದಿಸುವ ಸಂಪೂರ್ಣ ಅಧಿಕಾರ ಹೊಂದಿದ್ದರು. ಆದರೆ ಹೊಸ ನಿಯಮದ ಅನ್ವಯ, ಯಾವುದೇ ವಿಜ್ಞಾನಿ ರಾಜೀನಾಮೆ ನೀಡಿದರೆ ಅದನ್ನು ತಕ್ಷಣವೇ ಸ್ವೀಕರಿಸುವಂತಿಲ್ಲ. ಅವರು ನಿರ್ವಹಿಸುತ್ತಿರುವ ಯೋಜನೆ ಮುಗಿಯುವವರೆಗೆ ಅರ್ಜಿಯನ್ನು ಬಾಕಿ ಇಡಬೇಕು. ತದನಂತರ ಕೇಂದ್ರದ ನಿರ್ದೇಶಕರ ವಿಶೇಷ ಶಿಫಾರಸಿನೊಂದಿಗೆ ಬಾಹ್ಯಾಕಾಶ ಇಲಾಖೆಗೆ ಕಳುಹಿಸಿಕೊಡಬೇಕು. ಅಂತಿಮವಾಗಿ ಇಲಾಖೆ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ.

ಇಸ್ರೋದಲ್ಲಿ ಪ್ರತಿಭಾವಂತರು ಸಂಸ್ಥೆ ತೊರೆಯುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನ ಅಂಕಿಅಂಶಗಳನ್ನು ಗಮನಿಸಿದರೆ, 2004ರಿಂದ 2007ರ ಅವಧಿಯಲ್ಲಿ ನೇಮಕಗೊಂಡಿದ್ದ ಹೊಸ ಉದ್ಯೋಗಿಗಳಲ್ಲಿ ಅರ್ಧದಷ್ಟು ಮಂದಿ ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳಿಂದ ಇಸ್ರೋ ತೊರೆದಿದ್ದರು. ಹಾಗೆಯೇ 2012ರಿಂದ 2024ರ ನಡುವೆ ಸುಮಾರು 700 ಮಂದಿ ನೌಕರರು ರಾಜೀನಾಮೆ ನೀಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತವು ಗಗನಯಾನ ಹಾಗೂ ಚಂದ್ರಯಾನದಂತಹ ಜಾಗತಿಕ ಮಟ್ಟದ ಅತ್ಯಂತ ಸಂಕೀರ್ಣ ಯೋಜನೆಗಳ ಮಧ್ಯಭಾಗದಲ್ಲಿದೆ. ಇಂತಹ ಪ್ರಮುಖ ಘಟ್ಟದಲ್ಲಿ ವರ್ಷಗಟ್ಟಲೆ ಅನುಭವ ಹೊಂದಿರುವ ಹಿರಿಯ ವಿಜ್ಞಾನಿಗಳು ಹೊರನಡೆಯುತ್ತಿರುವುದು ತೀವ್ರ ಕಳವಳ ತಂದಿದೆ. ಹೊಸದಾಗಿ ನೇಮಕಾತಿ ಮಾಡಿಕೊಳ್ಳಬಹುದಾದರೂ, ಹಿರಿಯ ವಿಜ್ಞಾನಿಗಳ ತಾಂತ್ರಿಕ ಜ್ಞಾನ ಮತ್ತು ಸುದೀರ್ಘ ಅನುಭವಕ್ಕೆ ತಕ್ಷಣವೇ ಪರ್ಯಾಯವನ್ನು ಕಂಡುಕೊಳ್ಳುವುದು ಇಸ್ರೋ ಪಾಲಿಗೆ ಸುಲಭದ ಮಾತಲ್ಲ ಎಂದು ಬಾಹ್ಯಾಕಾಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Category
ಕರಾವಳಿ ತರಂಗಿಣಿ