ನವದೆಹಲಿ : ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಪರಿಸರ ಸ್ನೇಹಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ರೈಲು ಹರ್ಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಸಂಚರಿಸಲಿದ್ದು, ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯಲು ಸಜ್ಜಾಗಿದೆ. ಈ ವಿಶೇಷ ರೈಲು ಒಟ್ಟು 89 ಕಿಲೋಮೀಟರ್ ದೂರದ ಮಾರ್ಗದಲ್ಲಿ ಸೇವೆ ನೀಡಲಿದ್ದು, ಪ್ರತಿದಿನ 2 ರೌಂಡ್ ಟ್ರಿಪ್‌ಗಳನ್ನು ಮಾಡಲಿದೆ. ಒಟ್ಟು 12 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವ ಈ ರೈಲಿನಲ್ಲಿ ಏಕಕಾಲಕ್ಕೆ 2600 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. 1,200 ಕಿಲೋವ್ಯಾಟ್ ಹೈಡ್ರೋಜನ್ ಇಂಧನ ಪ್ರೊಪಲ್ಶನ್ ಸಿಸ್ಟಮ್ ಹೊಂದಿರುವ ಈ ರೈಲು, ಹೈಡ್ರೋಜನ್‌ಗೆ ಆಮ್ಲಜನಕವನ್ನು ಸೇರಿಸಿ ವಿದ್ಯುತ್ ಉತ್ಪಾದಿಸುವ ಮೂಲಕ ಚಲಿಸುತ್ತದೆ. ಇದು ಸಂಪೂರ್ಣವಾಗಿ ಕಾರ್ಬನ್ ಮುಕ್ತವಾಗಿದ್ದು, ಪರಿಸರಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.
ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ರೈಲು, ಈಗಾಗಲೇ ಹಲವು ಯಶಸ್ವಿ ಪ್ರಯೋಗಗಳ ಬಳಿಕ ಹಳಿಗೆ ಇಳಿಯುತ್ತಿದೆ. ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ದೇಶಗಳ ಸಾಲಿಗೆ ಈಗ ಭಾರತವೂ ಸೇರ್ಪಡೆಯಾಗುತ್ತಿದೆ. ವಿಶೇಷವಾಗಿ ರೈಲ್ವೇ ವಿದ್ಯುದ್ದೀಕರಣ ಕಷ್ಟಸಾಧ್ಯವಾಗಿರುವ ದುರ್ಗಮ ಗುಡ್ಡಗಾಡು ಪ್ರದೇಶಗಳು ಮತ್ತು ಸಬರ್ಬನ್ ಮಾರ್ಗಗಳಲ್ಲಿ ಇಂತಹ ಹೈಡ್ರೋಜನ್ ರೈಲುಗಳನ್ನು ಬಳಸಲು ಕೇಂದ್ರ ಸರ್ಕಾರ ಯೋಜಿಸಿದೆ.