ಹುಬ್ಬಳ್ಳಿ : ರೈಲು ಅಪಘಾತಗಳು ಹಾಗೂ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಅಳವಡಿಸಿಕೊಂಡಿರುವ 'ಸ್ಟ್ಯಾಂಡರ್ಡ್ ಕವಚ್' ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯು ಪ್ರಾಯೋಗಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ. ತುಮಕೂರಿನಿಂದ ಅರಸೀಕೆರೆವರೆಗಿನ 98 ರೂಟ್ ಕಿಲೋಮೀಟರ್ (RKM) ವ್ಯಾಪ್ತಿಯಲ್ಲಿ ಕಳೆದ ವಾರ ನಡೆಸಲಾದ ಕ್ಷೇತ್ರ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ರಾಜ್ಯದಲ್ಲಿ ಒಟ್ಟು 3,692 ಕಿಮೀ ಉದ್ದದ ರೈಲ್ವೆ ಜಾಲ ಹೊಂದಿರುವ ನೈರುತ್ಯ ರೈಲ್ವೆಯು, ಮೊದಲ ಹಂತದಲ್ಲಿ 628 ಕೋಟಿ ರೂಪಾಯಿ ವೆಚ್ಚದಲ್ಲಿ 1,568 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಈ ತಂತ್ರಜ್ಞಾನ ಅಳವಡಿಕೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಪೈಕಿ ಬೆಂಗಳೂರು-ಮೈಸೂರು ವಿಭಾಗದಲ್ಲಿ 778 ಕಿಮೀ ಹಾಗೂ ಹುಬ್ಬಳ್ಳಿ-ಮೈಸೂರು ವಿಭಾಗದಲ್ಲಿ 790 ಕಿಮೀ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, 2027ರ ಮಾರ್ಚ್ ವೇಳೆಗೆ ಮೊದಲ ಹಂತವನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ. ಬೆಂಗಳೂರು-ತುಮಕೂರು-ಅರಸೀಕೆರೆ, ಬೆಂಗಳೂರು-ಮೈಸೂರು, ಯಶವಂತಪುರ-ಧರ್ಮಪುರಿ, ಬೆಂಗಳೂರು-ವೈಟ್‌ಫೀಲ್ಡ್, ಬೈಯಪ್ಪನಹಳ್ಳಿ-ಧರ್ಮಾವರಂ ಹಾಗೂ ಕೃಷ್ಣರಾಜಪುರ-ಚನ್ನಸಂದ್ರ ಮಾರ್ಗಗಳಲ್ಲಿ ಪ್ರಸ್ತುತ ಕೆಲಸ ನಡೆಯುತ್ತಿದೆ. ಜೂನ್ 30 ರಂದು ಅರಸೀಕೆರೆ-ತುಮಕೂರು (98 ಕಿಮೀ) ಮತ್ತು ಜೋಲಾರಪೇಟೆ-ವೈಟ್‌ಫೀಲ್ಡ್ (122 ಕಿಮೀ) ಸೆಕ್ಷನ್‌ಗಳಲ್ಲಿನ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿದ್ದು, ಇನ್ನು ಎರಡು ಮಾರ್ಗಗಳು ಪರೀಕ್ಷಾ ಹಂತದಲ್ಲಿವೆ. ಪ್ರಸಕ್ತ ಜುಲೈನಲ್ಲಿ ಯಲಹಂಕ-ಧರ್ಮಾವರಂ ಹಾಗೂ ಬೆಂಗಳೂರು-ಮೈಸೂರು ಮಾರ್ಗ ಮತ್ತು ಆಗಸ್ಟ್‌ನಲ್ಲಿ ಬೆಂಗಳೂರು-ಧರ್ಮಪುರಿ ಸೆಕ್ಷನ್‌ನಲ್ಲಿ ಕವಚ್ ಅಳವಡಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
'ಕವಚ್' ಎಂಬುದು ರೈಲುಗಳ ಅಪಘಾತ ತಡೆಗಟ್ಟಲು ಮತ್ತು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆಯಾಗಿದೆ. ಇದು ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್ (SPAD) ತಡೆಯುವುದು, ಮುಖಾಮುಖಿ ಹಾಗೂ ಹಿಂಬದಿಯ ಡಿಕ್ಕಿಗಳನ್ನು ತಪ್ಪಿಸುವುದು, ಕ್ಯಾಬ್ ಸಿಗ್ನಲಿಂಗ್ ಒದಗಿಸುವುದು ಮತ್ತು ಗರಿಷ್ಠ ವೇಗ ಮಿತಿಗಳನ್ನು ಜಾರಿಗೊಳಿಸುವ ಮೂಲಕ ನಿರ್ಣಾಯಕ ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ, ಬ್ಲಾಕ್ ವಿಭಾಗದಲ್ಲಿ ಅಸಾಮಾನ್ಯ ನಿಲುಗಡೆಗಳ ಸಂದರ್ಭದಲ್ಲಿ ರೈಲುಗಳನ್ನು ರಕ್ಷಿಸುವುದು, ಸಮೀಪಿಸುತ್ತಿರುವ ರೈಲುಗಳಿಗೆ ಎಚ್ಚರಿಕೆ ನೀಡಲು ಹಸ್ತಚಾಲಿತ SOS ಸಂಕೇತಗಳನ್ನು ನೀಡುವುದು ಮತ್ತು ಇಳಿಜಾರುಗಳಲ್ಲಿ ರೈಲು ಹಿಂದಕ್ಕೆ ಚಲಿಸುವುದನ್ನು ತಡೆಗಟ್ಟುವಲ್ಲಿ ಇದು ಸಹಕಾರಿಯಾಗಿದೆ. ರೈಲು ಚಲನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಈ ತಂತ್ರಜ್ಞಾನವು, ಸಂವಹನ ವೈಫಲ್ಯದ ಸಂದರ್ಭದಲ್ಲಿ ಸುರಕ್ಷಿತವಾಗಿ ನಿಯಂತ್ರಿತ ವಿಧಾನಗಳಿಗೆ ಬದಲಾಗುತ್ತದೆ. ಮೊದಲ ಹಂತದ ಬಳಿಕ ಎರಡನೇ ಹಂತದಲ್ಲಿ ಉಳಿದ 2,124 ಕಿಮೀ ವ್ಯಾಪ್ತಿಯಲ್ಲಿ ಕವಚ್ ತಂತ್ರಜ್ಞಾನವನ್ನು ಅಳವಡಿಸಲು ರೈಲ್ವೆ ಇಲಾಖೆ ಯೋಜಿಸಿದೆ.