ನವದೆಹಲಿ : ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಒಳನಾಡು ಪ್ರದೇಶಗಳ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 275ರ ಮಾಣಿ-ಸಂಪಾಜೆ ರಸ್ತೆಯ ವಿಶೇಷ ತುರ್ತು ದುರಸ್ತಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರವು 49.22 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇಪಿಸಿ (EPC) ಮಾದರಿಯಲ್ಲಿ ಈ ಮೊತ್ತವನ್ನು ಬಿಡುಗಡೆಗೊಳಿಸಿದೆ. ಈ ಯೋಜನೆಯಡಿ ಒಟ್ಟು 71.60 ಕಿ.ಮೀ. ರಸ್ತೆಗೆ 40 ಮಿ.ಮೀ ದಪ್ಪದ ಬಿಟುಮಿನಸ್ ಅಳವಡಿಕೆ, ರಸ್ತೆ ಇಕ್ಕೆಲಗಳ ನಿರ್ವಹಣೆ, ಸಂಚಾರ ಸೂಚಕ ಫಲಕ ಹಾಗೂ ರೋಡ್ ಮಾರ್ಕಿಂಗ್ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಸಚಿವಾಲಯದಿಂದ ಅನುಮೋದನೆ ಸಿಕ್ಕ ತಕ್ಷಣವೇ ಟೆಂಡರ್ ಕರೆಯಲಾಗುವುದು.
ಈ ವಿಶೇಷ ಅನುದಾನದ ಬೆನ್ನಲ್ಲೇ, ಮಾಣಿ-ಸಂಪಾಜೆ ಹೆದ್ದಾರಿಯನ್ನು ಪೇವ್ಡ್ ಶೋಲ್ಡರ್ ಒಳಗೊಂಡ ಚತುಷ್ಪಥ (4-ಲೇನ್) ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯನ್ನು 2026-27ರ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದ್ದು, ಇದರ ವಿಸ್ತೃತ ಯೋಜನಾ ವರದಿ (DPR) ಸಿದ್ಧತೆಯ ಹಂತದಲ್ಲಿದೆ. ಈ ಯೋಜನೆಗೆ ಆಡಳಿತಾತ್ಮಕ ಮತ್ತು ಅಲೈನ್‌ಮೆಂಟ್ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೋರಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನವದೆಹಲಿಯಲ್ಲಿ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿಯಾಗಿ ಸುಧೀರ್ಘ ಸಮಾಲೋಚನೆ ನಡೆಸಿದ್ದಾರೆ. ಪ್ರಾದೇಶಿಕ ಆರ್ಥಿಕ ಬೆಳವಣಿಗೆ ಹಾಗೂ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಈ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕಾದ ಅಗತ್ಯವನ್ನು ಅವರು ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇಗೆ ಸಂಬಂಧಿಸಿದಂತೆಯೂ ಚರ್ಚೆ ನಡೆದಿದ್ದು, ಶಿರಾಡಿ ಘಾಟ್ ವಿಭಾಗದ ನೂತನ ರಸ್ತೆ ವಿನ್ಯಾಸಕ್ಕೆ ’ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ' ಅನುಮೋದನೆ ನೀಡಿರುವುದನ್ನು ಸಂಸದರು ಶ್ಲಾಘಿಸಿದ್ದಾರೆ. ಪ್ರಸ್ತುತ ಈ ಯೋಜನೆಯ DPR ತಯಾರಿ ನಡೆಯುತ್ತಿದ್ದು, ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜಿಲ್ಲೆಯ ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರದ ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ನಿರಂತರ ಫಾಲೋಅಪ್ ಮಾಡುವುದಾಗಿ ಭರವಸೆ ನೀಡಿರುವ ಕ್ಯಾ. ಚೌಟ, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶ್ವದರ್ಜೆಯ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಉತ್ತಮ ರಸ್ತೆ ಸಂಪರ್ಕವು ಹೂಡಿಕೆ, ಆರ್ಥಿಕತೆ ಮತ್ತು ಉದ್ಯೋಗ ಅವಕಾಶಗಳಿಗೆ ಹೆಬ್ಬಾಗಿಲಾಗಿದ್ದು, ಜಿಲ್ಲೆಯ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಗಳು ಸಾಕಾರಗೊಳ್ಳುವವರೆಗೆ ನಿರಂತರವಾಗಿ ಶ್ರಮಿಸುತ್ತೇನೆ" ಎಂದು ತಿಳಿಸಿದ್ದಾರೆ.