ನವದೆಹಲಿ : ದೇಶದ ಪ್ರಮುಖ ನಾಲ್ಕು ಸಾರ್ವಜನಿಕ ವಲಯದ (PSU) ಬ್ಯಾಂಕ್‌ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ (BoB) ಮತ್ತು ಇಂಡಿಯನ್ ಬ್ಯಾಂಕ್ ಜಂಟಿಯಾಗಿ 2025-26ರ ಹಣಕಾಸು ವರ್ಷಕ್ಕೆ ಒಟ್ಟು ₹9,439 ಕೋಟಿ ರೂಪಾಯಿಗಳ ಲಾಭಾಂಶವನ್ನು (ಡಿವಿಡೆಂಡ್) ಕೇಂದ್ರ ಸರ್ಕಾರಕ್ಕೆ ಪಾವತಿಸಿವೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‌ಗಳ ಮುಖ್ಯಸ್ಥರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಲಾಭಾಂಶದ ಚೆಕ್‌ಗಳನ್ನು ಹಸ್ತಾಂತರಿಸಿದರು. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಾಲ್ಕು ಬ್ಯಾಂಕ್‌ಗಳ ಪೈಕಿ ಬ್ಯಾಂಕ್ ಆಫ್ ಬರೋಡಾ ಅತಿ ಹೆಚ್ಚಿನ ಲಾಭಾಂಶವನ್ನು ನೀಡಿದೆ. ಬ್ಯಾಂಕ್‌ನ ಎಂಡಿ ಮತ್ತು ಸಿಇಒ ದೆಬದತ್ತ ಚಂದ್ ಅವರು ₹2,811 ಕೋಟಿ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು. ಸಂಸ್ಥೆಯು 2025-26ರ ಸಾಲಿಗೆ ತನ್ನ ಪ್ರತಿ ಈಕ್ವಿಟಿ ಷೇರಿಗೆ ₹8.50 ರಂತೆ (ಶೇಕಡಾ 425 ರಷ್ಟು) ಬಂಪರ್ ಲಾಭಾಂಶವನ್ನು ಪ್ರಕಟಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಅಶೋಕ್ ಚಂದ್ರ ಅವರು ₹2,416 ಕೋಟಿ ರೂಪಾಯಿಗಳ ಲಾಭಾಂಶದ ಚೆಕ್ ಸಲ್ಲಿಸಿದರು.
ಇತ್ತೀಚೆಗಷ್ಟೇ ಕೆನರಾ ಬ್ಯಾಂಕ್‌ನ ನೂತನ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಬ್ರಜೇಶ್ ಕುಮಾರ್ ಸಿಂಗ್ ಅವರು ಹಣಕಾಸು ಸಚಿವರಿಗೆ ₹2,397 ಕೋಟಿ ರೂಪಾಯಿಗಳ ಚೆಕ್ ನೀಡಿದರು. ಕೆನರಾ ಬ್ಯಾಂಕ್ ಪ್ರತಿ ಷೇರಿಗೆ ₹4.2 ರಂತೆ (ಶೇಕಡಾ 210 ರಷ್ಟು) ಲಾಭಾಂಶ ಘೋಷಿಸಿದ್ದು, ಇದು ಹೂಡಿಕೆದಾರರಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ. ಹಾಗೆಯೇ, ಚೆನ್ನೈ ಮೂಲದ ಇಂಡಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ವಿನೋದ್ ಕುಮಾರ್ ಅವರು ₹1,815.05 ಕೋಟಿ ರೂಪಾಯಿಗಳ ಲಾಭಾಂಶದ ಚೆಕ್ ಅನ್ನು ಹಸ್ತಾಂತರಿಸಿದರು. ಭಾರತ ಸರ್ಕಾರದ 'ವಿಕಸಿತ ಭಾರತ'ದ ದೂರದೃಷ್ಟಿಗೆ ಬೆಂಬಲ ನೀಡಲು ಇಂಡಿಯನ್ ಬ್ಯಾಂಕ್ ಸದಾ ಬದ್ಧವಾಗಿದೆ ಎಂದು ಬ್ಯಾಂಕ್ ಹೇಳಿದೆ. ವಂಚನೆಗಳಿಗೆ ಬ್ರೇಕ್ ಹಾಕಿ, ಆಂತರಿಕ ಆರ್ಥಿಕ ಶಿಸ್ತು ಕಾಯ್ದುಕೊಂಡಿರುವುದು ಬ್ಯಾಂಕ್‌ಗಳ ಈ ಸಾಧನೆಗೆ ಮುಖ್ಯ ಕಾರಣವಾಗಿದೆ. ಆಸ್ತಿಯ ಗುಣಮಟ್ಟವನ್ನು ಬಲಪಡಿಸುವುದು, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಗ್ರಾಹಕಸ್ನೇಹಿ ಉಪಕ್ರಮಗಳಿಗೆ ಆದ್ಯತೆ ನೀಡಿರುವುದರಿಂದ ಈ ಮಟ್ಟದ ಬೃಹತ್ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.