ನವದೆಹಲಿ : ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಲು ಹೋಗಿ ಹಿಮದಲ್ಲಿ ಹೆಪ್ಪುಗಟ್ಟಿ ಪ್ರಾಣ ಕಳೆದುಕೊಂಡ ನೂರಾರು ಪರ್ವತಾರೋಹಿಗಳ ಮೃತದೇಹಗಳು ಇಂದಿಗೂ ಅಲ್ಲಿಯೇ ಇವೆ. ಅದರಲ್ಲಿ ಕಳೆದ ಮೂರು ದಶಕಗಳಿಂದ ಪರ್ವತಾರೋಹಿಗಳಿಗೆ ದಾರಿದೀಪದಂತೆ ಕಾಣುತ್ತಿದ್ದ ಅತ್ಯಂತ ಪ್ರಸಿದ್ಧ 'ಗ್ರೀನ್ ಬೂಟ್ಸ್' (Green Boots) ಮೃತದೇಹವನ್ನು ಕೊನೆಗೂ ಗೌರವಯುತವಾಗಿ ತಾಯ್ನಾಡಿಗೆ ಮರಳಿ ತರಲು ಭಾರತ ಸರ್ಕಾರ ಸಜ್ಜಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 1996ರಿಂದ ಎವರೆಸ್ಟ್‌ನ ಉತ್ತರ ದಿಕ್ಕಿನ ಹಾದಿಯ ಸಣ್ಣ ಗುಹೆಯೊಳಗೆ ಹಸಿರು ಬಣ್ಣದ ಬೂಟುಗಳನ್ನು ಧರಿಸಿದ ಈ ಮೃತದೇಹ ಇತ್ತು. ಇಷ್ಟು ದಿನ ಇದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯ ತ್ಸೆವಾಂಗ್ ಪಲ್ಜೋರ್ ಅವರದ್ದು ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಡಿಎನ್‌ಎ ಪರೀಕ್ಷೆ ಹಾಗೂ ಅಧಿಕೃತ ದಾಖಲೆಗಳ ಪ್ರಕಾರ, ಇದು ಅದೇ ವರ್ಷದ ಹಿಮಪಾತದಲ್ಲಿ ಮಡಿದ ಲಾನ್ಸ್ ನಾಯಕ್ ದೋರ್ಜೆ ಮೊರುಪ್ ಅವರದ್ದು ಎಂದು ಪತ್ತೆಯಾಗಿದೆ.
ಈಗ ತನ್ನ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಭಾರತ ಸರ್ಕಾರ ಮುಂದಾಗಿದ್ದು, ಅಂತರರಾಷ್ಟ್ರೀಯ ವರದಿಗಳ ಪ್ರಕಾರ ಮೃತದೇಹವನ್ನು ಕೆಳಕ್ಕೆ ತರಲು ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ. ಅಕ್ಟೋಬರ್ ತಿಂಗಳ ಒಳಗಾಗಿ ಮೊರುಪ್ ಅವರ ಅವಶೇಷಗಳನ್ನು ದೆಹಲಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಆದರೆ ಈ ಕಾರ್ಯಾಚರಣೆ ಅಷ್ಟು ಸುಲಭವಲ್ಲ. ಮೃತದೇಹವು ಎವರೆಸ್ಟ್‌ನ 'ಡೆತ್ ಝೋನ್' (ಸಾವಿನ ವಲಯ) ನಲ್ಲಿದೆ, ಇಲ್ಲಿ ಆಮ್ಲಜನಕದ ಮಟ್ಟ ಅತ್ಯಂತ ಕಡಿಮೆ ಇರುತ್ತದೆ. ದಶಕಗಳಿಂದ ಹಿಮಗಟ್ಟಿದ ಕಾರಣ ದೇಹದ ತೂಕವೂ ಹೆಚ್ಚಾಗಿದ್ದು, ಕಡಿದಾದ ಹಿಮದ ಗೋಡೆಗಳ ಮೇಲೆ ಇದನ್ನು ಹೊತ್ತು ತರುವುದು ಅತ್ಯಂತ ಅಪಾಯಕಾರಿಯಾಗಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದ ಪರಿಣಿತ ಶೆರ್ಪಾಗಳು ಮತ್ತು ತಜ್ಞರ ನೆರವು ಪಡೆಯಲಾಗುತ್ತಿದೆ.
30 ವರ್ಷಗಳ ಹಿಂದೆ ದೇಶದ ಸೇವೆಗಾಗಿ ಹೋಗಿ ಹಿಮದಲ್ಲಿ ಕಣ್ಮರೆಯಾಗಿದ್ದ ಯೋಧನ ಮೃತದೇಹ ವಾಪಸ್ ಬರುತ್ತಿರುವುದು ಅವರ ಕುಟುಂಬಕ್ಕೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಎಷ್ಟೇ ಪ್ರಾಣಾಪಾಯವಿದ್ದರೂ ಭಾರತ ಸರ್ಕಾರ ತನ್ನ ಯೋಧನಿಗೆ ಸಲ್ಲಿಸುತ್ತಿರುವ ಈ ಗೌರವ ದೇಶದ ಹೆಮ್ಮೆಯನ್ನು ಎತ್ತಿ ಹಿಡಿದಿದೆ.