ಚೆನ್ನೈ : ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ಜೋಸೆಫ್ ವಿಜಯ್ ಅವರು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸಾರ್ವಜನಿಕರಿಗೆ ಅತ್ಯುತ್ತಮ ಮತ್ತು ಆರಾಮದಾಯಕ ಪ್ರಯಾಣ ಸೇವೆಯನ್ನು ನೀಡುವ ಗುರಿಯೊಂದಿಗೆ, ಮುಂದಿನ ದಿನಗಳಲ್ಲಿ ಸರ್ಕಾರ ಖರೀದಿಸುವ ಎಲ್ಲಾ ಹೊಸ ಬಸ್‌ಗಳು ಕಡ್ಡಾಯವಾಗಿ ಎಸಿ (ಹವಾನಿಯಂತ್ರಿತ) ಸೌಕರ್ಯವನ್ನು ಹೊಂದಿರಬೇಕು ಎಂದು ಸಿಎಂ ಆದೇಶಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ತಮಿಳುನಾಡು ಸಾರಿಗೆ ಸಚಿವ ಪಾರ್ಥಿಮನ್ ಅವರು, ರಾಜ್ಯದಲ್ಲಿ ಬಿಸಿ ಹಾಗೂ ಶುಷ್ಕ ವಾತಾವರಣ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಟಿವಿಕೆ (TVK) ಸರ್ಕಾರ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸಲು ಈ ವಿಶೇಷ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ. ತಮಿಳುನಾಡಿನ ಪ್ರತಿಯೊಂದು ದೂರದ ಹಳ್ಳಿಗೂ ಉತ್ತಮ ಬಸ್ ಸೌಲಭ್ಯವನ್ನು ತಲುಪಿಸುವುದು ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲದೆ ಆರಾಮದಾಯಕ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಸಿಎಂ ವಿಜಯ್ ಅವರ ಮುಖ್ಯ ಗುರಿಯಾಗಿದೆ. ಇದರೊಂದಿಗೆ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲು ನಿರ್ಧರಿಸಲಾಗಿದ್ದು, ಈ ಕುರಿತು ಸಮೀಕ್ಷೆ ನಡೆಯುತ್ತಿದ್ದು ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಸಿಎಂ ವಿಜಯ್, ಪ್ರಜಾ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈಗಾಗಲೇ ಉಚಿತ ವಿದ್ಯುತ್ ಯೋಜನೆ, ರೈತರ ಸಾಲ ಮನ್ನಾ, ಮತ್ತು ಜನಿಸಿದ ಪ್ರತಿ ಮಗುವಿಗೆ ಚಿನ್ನದ ಉಂಗುರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಸಿಎಂ ವಿಜಯ್ ಅವರು 127.31 ಕೋಟಿ ರೂಪಾಯಿ ವೆಚ್ಚದಲ್ಲಿ 164 ಡೀಸೆಲ್ ಬಸ್ ಹಾಗೂ 136 ಬಿಎಸ್-6 ಮಾದರಿಯ ಒಟ್ಟು 300 ಹೊಸ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದ್ದರು.