image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಆರೋಪಿಗಳ ಪರ ವಕಾಲತ್ತು ವಹಿಸದಂತೆ ಬಾರ್ ಅಸೋಸಿಯೇಷನ್ ಐತಿಹಾಸಿಕ ನಿರ್ಧಾರ

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಆರೋಪಿಗಳ ಪರ ವಕಾಲತ್ತು ವಹಿಸದಂತೆ ಬಾರ್ ಅಸೋಸಿಯೇಷನ್ ಐತಿಹಾಸಿಕ ನಿರ್ಧಾರ

ಅಯೋಧ್ಯಾ : ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣವು ದೇಶವಿದೇಶಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಈ ಪ್ರಕರಣದ ಆರೋಪಿಗಳಿಗೆ ಭಾರಿ ಹಿನ್ನಡೆಯಾಗಿದೆ. ಫೈಜಾಬಾದ್ ಬಾರ್ ಅಸೋಸಿಯೇಷನ್‌ನ ಮಹಾಸಭೆಯಲ್ಲಿ ಬಂಧಿತ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವೇಳೆ ನಿಯಮ ಮೀರಿ ಯಾರಾದರೂ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಯತ್ನಿಸಿದರೆ, ಅವರಿಗೆ ಐದು ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಲಾಗುವುದು ಎಂದು ಬಾರ್ ಅಸೋಸಿಯೇಷನ್ ಎಚ್ಚರಿಸಿದೆ.

ದೇವಾಲಯದ ಕಾಣಿಕೆಗಳ ಕಳ್ಳತನವು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ವಕೀಲರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಠಿಣ ತೀರ್ಮಾನದಿಂದಾಗಿ ಸಿಕ್ಕಿಬಿದ್ದಿರುವ ಆರೋಪಿಗಳು ಕಾನೂನು ನೆರವು ಸಿಗದೇ ಕಕ್ಕಾಬಿಕ್ಕಿಯಾಗಿದ್ದು, ಹೊರಗಿನ ಊರುಗಳ ವಕೀಲರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಹಿಂದೆ 2005 ರಲ್ಲಿ ರಾಮ ಜನ್ಮಭೂಮಿ ಸಂಕೀರ್ಣದ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ಆರೋಪಿಗಳ ಪರವಾಗಿಯೂ ವಕಾಲತ್ತು ವಹಿಸದಿರಲು ಫೈಜಾಬಾದ್ ಬಾರ್ ಅಸೋಸಿಯೇಷನ್ ಇದೇ ರೀತಿಯ ಕಠಿಣ ನಿರ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತೊಂದೆಡೆ, ದೇವಾಲಯದ ನಿರ್ವಹಣೆಯೊಂದಿಗೆ ಗುರುತಿಸಿಕೊಂಡಿರುವ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರು ಮೂರು ದಿನಗಳ ಒಳಗಾಗಿ ಅಯೋಧ್ಯೆಯನ್ನು ತೊರೆಯಬೇಕು ಎಂದು ವಕೀಲರು ಸಭೆಯಲ್ಲಿ ಬಲವಾಗಿ ಒತ್ತಾಯಿಸಿದ್ದಾರೆ. ನಿಗದಿತ ಅವಧಿಯಲ್ಲಿ ಅವರು ನಗರವನ್ನು ತೊರೆಯದಿದ್ದರೆ ಇಡೀ ಅಯೋಧ್ಯಾ ನಗರವನ್ನು ಮುತ್ತಿಗೆ ಹಾಕಿ, ಯಾರನ್ನೂ ಒಳಗೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಕುರಿತು ಪರ-ವಿರೋಧದ ಚರ್ಚೆಗಳು ಹಾಗೂ ವಿಕೃತ ಸಂತೋಷದ ಪೋಸ್ಟ್‌ಗಳು ಹರಿದಾಡುತ್ತಿರುವ ನಡುವೆಯೇ, ವಕೀಲರ ಸಂಘದ ಈ ನಡೆ ತೀವ್ರ ಸಂಚಲನ ಸೃಷ್ಟಿಸಿದೆ.

Category
ಕರಾವಳಿ ತರಂಗಿಣಿ