ನವದೆಹಲಿ: ಬರುವ ಜುಲೈ 3 ರಿಂದ ಆಗಸ್ಟ್ 28ರ ವರೆಗೆ ಪವಿತ್ರ ಅಮರನಾಥ ಯಾತ್ರೆ ನಡೆಯಲಿದ್ದು, ಕೇಂದ್ರ ಸರ್ಕಾರವು ಯಾತ್ರಾರ್ಥಿಗಳ ಸುರಕ್ಷತೆಗಾಗಿ ಬಹುಹಂತದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 45 ವಿದೇಶಿ ಭಯೋತ್ಪಾದಕರು ಸಕ್ರಿಯರಾಗಿದ್ದು, ಯಾತ್ರೆಗೆ ಅಡ್ಡಿಪಡಿಸುವ ಸಂಚು ರೂಪಿಸಿದ್ದಾರೆ ಎಂಬ ಆತಂಕಕಾರಿ ಸುಳಿವು ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಅಮರನಾಥ ಯಾತ್ರೆಯ ಮಾರ್ಗದುದ್ದಕ್ಕೂ ಯಾತ್ರಿಕರಿಗೆ ತೊಂದರೆ ನೀಡಲು ಸುಮಾರು 36 ಉಗ್ರರು ಹೊಂಚು ಹಾಕಿದ್ದಾರೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಗುಪ್ತಚರ ಅಧಿಕಾರಿಗಳ ಪ್ರಕಾರ, ಈ ಉಗ್ರರು ಜೈಶ್-ಎ-ಮೊಹ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳಿಗೆ ಸೇರಿದವರಾಗಿದ್ದು, ಅಫ್ಘಾನಿಸ್ಥಾನ ಗಡಿಯ ಕ್ಯಾಂಪ್‌ಗಳಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಯಾತ್ರೆಯ ಮಾರ್ಗದ ಪ್ರತಿ ಕಿಲೋಮೀಟರ್‌ಗೆ ಒಂದರಂತೆ ಸಿಆರ್‌ಪಿಎಫ್ ಕ್ಯಾಂಪ್‌ಗಳನ್ನು ತೆರೆಯಲಾಗಿದ್ದು, ಅಪಾಯದ ಸಮಯದಲ್ಲಿ ಯೋಧರು ತಕ್ಷಣವೇ ಸ್ಪಂದಿಸಲು ಸಜ್ಜಾಗಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಲಖನ್‌ಪುರ ಸೇರಿದಂತೆ ಪ್ರಮುಖ ಸ್ಥಳಗಳ ಮಾರ್ಗದುದ್ದಕ್ಕೂ ಭದ್ರತೆ ಒದಗಿಸಲು 670 ಸಿಎಪಿಎಫ್ ತಂಡಗಳನ್ನು ನಿಯೋಜಿಸಿದೆ. ಪರ್ವತ ಶ್ರೇಣಿಯ ಎತ್ತರದ ಪ್ರದೇಶಗಳಲ್ಲೂ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದ್ದು, ಇತ್ತೀಚೆಗೆ ಜಮ್ಮು-ಕಾಶ್ಮೀರ ಪೊಲೀಸರ ಸಹಕಾರದೊಂದಿಗೆ ನಡೆಸಿದ ಶೋಧ ಕಾರ್ಯದಲ್ಲಿ ಕೆಲ ಸ್ಥಳೀಯ ಶಂಕಿತರನ್ನು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಾರಿ ಸುಮಾರು ಮೂರೂವರೆ ಲಕ್ಷ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆಯಿದ್ದು, ಉಗ್ರರ ಭೀತಿಯ ನಡುವೆ ಶಾಂತಿಯುತವಾಗಿ ಯಾತ್ರೆ ಪೂರ್ಣಗೊಳಿಸುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದರೂ, ಭದ್ರತಾ ಪಡೆಗಳು ಹೈ ಅಲರ್ಟ್ ಆಗಿ ಕಾರ್ಯಾಚರಣೆ ನಡೆಸುತ್ತಿವೆ.