ನವದೆಹಲಿ : ವೈರಲ್ ಆಗಿರುವ ಎಥೆನಾಲ್ 20 (ಇ20) ಇಂಧನಕ್ಕೆ ಸಂಬಂಧಿಸಿದ ವಿಡಿಯೋಗಳು ಸಂಪೂರ್ಣ ಆಧಾರರಹಿತ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಸುರಕ್ಷಿತ, ಗ್ರಾಹಕಸ್ನೇಹಿ ಮತ್ತು ಆರ್ಥಿಕವಾಗಿ ದೇಶಕ್ಕೆ ಲಾಭದಾಯಕವಾಗಿದೆ ಎಂದು ಸಾರ್ವಜನಿಕರಿಗೆ ಸಚಿವಾಲಯ ಭರವಸೆ ನೀಡಿದೆ. ಸಾರ್ವಜನಿಕರಲ್ಲಿ ಅನಗತ್ಯ ಕಳವಳ ಹಾಗೂ ಗೊಂದಲ ಮೂಡಿಸಲು ಹಳೆಯ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿರುವುದನ್ನು ಗಮನಿಸಿ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ವಿಶೇಷವಾಗಿ, ಕಬ್ಬಿನ ರಸವನ್ನು ನೇರವಾಗಿ ಪೆಟ್ರೋಲ್‌ನೊಂದಿಗೆ ಬೆರೆಸಲಾಗುತ್ತಿದೆ ಎಂದು ತಪ್ಪಾಗಿ ಬಿಂಬಿಸುವ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿದ್ದು, ಇದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಸಚಿವಾಲಯ ಹೇಳಿದೆ. ಇಂಧನ ಮಿಶ್ರಣಕ್ಕೆ ಬಳಸುವ ಎಥೆನಾಲ್ ಅನ್ನು ಕಬ್ಬಿನ ರಸ, ಮೊಲಾಸಸ್, ಮುರಿದ ಅಕ್ಕಿ ಮತ್ತು ಮೆಕ್ಕೆಜೋಳ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳಿಂದ ಹುದುಗುವಿಕೆಯಂತಹ ಕಠಿಣ ಕೈಗಾರಿಕಾ ಪ್ರಕ್ರಿಯೆಗಳ ಮೂಲಕ ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಚ್ಚಾ ವಸ್ತುವಿನಲ್ಲಿರುವ ಸಕ್ಕರೆಯಂಶ ಸಂಪೂರ್ಣವಾಗಿ ರೂಪಾಂತರಗೊಳ್ಳುವುದರಿಂದ, ಎಥೆನಾಲ್ ಗುಣಲಕ್ಷಣಗಳು ಕಚ್ಚಾ ವಸ್ತುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ ಮತ್ತು ಪೆಟ್ರೋಲ್‌ನೊಂದಿಗೆ ಬೆರೆಸುವ ಮೊದಲು ಕಟ್ಟುನಿಟ್ಟಾದ ಗುಣಮಟ್ಟದ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಕೇವಲ ವ್ಯೂಸ್ ಪಡೆಯುವ ಹಪಾಹಪಿಯಿಂದ ಇಂತಹ ಸುಳ್ಳು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಸಚಿವಾಲಯ ಬೇಸರ ವ್ಯಕ್ತಪಡಿಸಿದೆ.
ಇತ್ತೀಚೆಗೆ ವಾಹನದ ಇಂಧನ ಟ್ಯಾಂಕ್ ಬಳಿ ಇರುವೆಗಳು ಇರುವುದನ್ನು ತೋರಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಧನ-ದರ್ಜೆಯ ಎಥೆನಾಲ್ ಅನ್ನು ಬಟ್ಟಿ ಇಳಿಸುವಿಕೆ ಪ್ರಕ್ರಿಯೆಯ ಮೂಲಕ ತಯಾರಿಸುವುದರಿಂದ ಅಂತಿಮ ಉತ್ಪನ್ನದಲ್ಲಿ ಯಾವುದೇ ಸಕ್ಕರೆಯಂಶ ಉಳಿಯುವುದಿಲ್ಲ ಎಂದು ತಿಳಿಸಿತ್ತು. ಜೊತೆಗೆ, ಈ ಇಂಧನವು ಕೀಟ ನಿವಾರಕ ಗುಣ ಹೊಂದಿರುವ ಡಿನಾಚುರಂಟ್‌ಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಇ20 ಇಂಧನಕ್ಕೆ ಇರುವೆಗಳು ಆಕರ್ಷಿತವಾಗುತ್ತವೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಸಚಿವಾಲಯ ಪುನರುಚ್ಚರಿಸಿದೆ.
ಭಾರತದಲ್ಲಿ ಆಟೋಮೊಬೈಲ್ ತಯಾರಕರು ಮತ್ತು ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ಬಳಿಕವೇ ಇಂಧನ ಮಿಶ್ರಣದ ಮಟ್ಟವನ್ನು ಹೆಚ್ಚಿಸಲಾಗಿದೆ. ಎಥೆನಾಲ್ ಮಿಶ್ರಣವು ಜಾಗತಿಕವಾಗಿ ಅಂಗೀಕರಿಸಲ್ಪಟ್ಟಿದ್ದು, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಬ್ರೆಜಿಲ್‌ನಂತಹ ದೇಶಗಳಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದೆ. ಬ್ರೆಜಿಲ್‌ನಲ್ಲಿ ಬಹಳ ಹಿಂದಿನಿಂದಲೂ ಇ27 ಇಂಧನವನ್ನು ಪ್ರಮಾಣಿತ ಪೆಟ್ರೋಲ್ ಆಗಿ ಬಳಸಲಾಗುತ್ತಿದೆ.
ಭಾರತದಲ್ಲಿ ಈ ಕಾರ್ಯಕ್ರಮದಿಂದಾಗಿ ಕಚ್ಚಾ ತೈಲ ಆಮದು ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಬರೋಬ್ಬರಿ 1.4 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದೆ. ಇದು ಕೃಷಿ ಉತ್ಪನ್ನಗಳಿಗೆ ನಿರಂತರ ಬೇಡಿಕೆ ಸೃಷ್ಟಿಸುವ ಮೂಲಕ ಗ್ರಾಮೀಣ ಆರ್ಥಿಕತೆ ಮತ್ತು ರೈತರ ಆದಾಯವನ್ನು ಬಲಪಡಿಸಿದೆ. ದೇಶದ ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಎಥೆನಾಲ್ ಮಿಶ್ರಣವು ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಚಿವಾಲಯ ಕೋರಿದೆ.