ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ನಿಯಮಗಳು ಅತ್ಯಂತ ಕಟ್ಟುನಿಟ್ಟಾಗಿದ್ದರೂ, ಇತ್ತೀಚೆಗೆ ಎದುರಾದ ಪ್ರಕೃತಿ ವಿಕೋಪದ ಕಾರಣದಿಂದಾಗಿ ಪಾಕಿಸ್ತಾನಕ್ಕೆ ಸೇರಿದ ಮೂರು ವಾಣಿಜ್ಯ ವಿಮಾನಗಳು ದಿಢೀರನೆ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿದ ಘಟನೆ ನಡೆದಿದೆ. ಫ್ಲೈಟ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ, ಜೂನ್ 12 ರಂದು ಈ ಘಟನೆ ಸಂಭವಿಸಿದೆ. ಲಾಹೋರ್‌ನಿಂದ ದುಬೈ ಮತ್ತು ಜೆಡ್ಡಾ ಕಡೆಗೆ ಹೊರಟಿದ್ದ 'ಫ್ಲೈ ಜಿನ್ನಾ' ಸಂಸ್ಥೆಯ ಎರಡು ವಿಮಾನಗಳು ಹಾಗೂ ದಮ್ಮಾಮ್‌ನಿಂದ ಲಾಹೋರ್‌ಗೆ ಬರುತ್ತಿದ್ದ 'ಏರ್ ಸಿಯಾಲ್' ಸಂಸ್ಥೆಯ ಒಂದು ವಿಮಾನ ಹವಾಮಾನ ವೈಪರೀತ್ಯಕ್ಕೆ ಸಿಲುಕಿದ್ದವು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ಗಾಳಿಮಳೆ ಮತ್ತು ಬಿರುಗಾಳಿ ಎದ್ದಿದ್ದರಿಂದ, ವಿಮಾನಗಳನ್ನು ಸುರಕ್ಷಿತವಾಗಿ ಮುನ್ನಡೆಸಲು ಪೈಲಟ್‌ಗಳಿಗೆ ಸಾಧ್ಯವಾಗಲಿಲ್ಲ. ಈ ತುರ್ತು ಪರಿಸ್ಥಿತಿಯಲ್ಲಿ ವಿಮಾನಗಳ ಸುರಕ್ಷತೆಯ ದೃಷ್ಟಿಯಿಂದ ಭಾರತದ ವಾಯುಯಾನ ಅಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ತಮ್ಮ ವಾಯುಪ್ರದೇಶವನ್ನು ಬಳಸಿಕೊಳ್ಳಲು ಪಾಕಿಸ್ತಾನಿ ವಿಮಾನಗಳಿಗೆ ಅನುಮತಿ ನೀಡಿದ್ದರು ಎನ್ನಲಾಗಿದೆ.
ಅನುಮತಿ ಸಿಗುತ್ತಿದ್ದಂತೆಯೇ ಈ ಮೂರು ವಿಮಾನಗಳು ಭಾರತದ ಗಡಿಯೊಳಗೆ ಪ್ರವೇಶಿಸಿ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿದವು. ಇದರಲ್ಲಿ ಒಂದು ವಿಮಾನ ಬರೋಬ್ಬರಿ 15 ನಿಮಿಷಗಳಿಗಿಂತ ಹೆಚ್ಚು ಕಾಲ ಭಾರತದ ಆಕಾಶದಲ್ಲೇ ಇತ್ತು ಎಂದು ವರದಿಗಳು ತಿಳಿಸಿವೆ. ಅಮೃತಸರದಲ್ಲಿ ಏರ್ ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ ಮತ್ತೆ ಮೇಲಕ್ಕೆ ಹಾರುವಾಗ (ಗೋ-ಅರೌಂಡ್) ಅಂತರರಾಷ್ಟ್ರಿಯ ಗಡಿ ದಾಟಿದ ಘಟನೆ ನಡೆಯುವುದಕ್ಕಿಂತ ಕೇವಲ ಒಂದು ವಾರದ ಮುಂಚೆಯೇ ಈ ಪಾಕಿಸ್ತಾನಿ ವಿಮಾನಗಳು ಭಾರತದ ಗಡಿಯೊಳಗೆ ಬಂದಿದ್ದವು ಎಂಬುದು ಇಲ್ಲಿ ಗಮನಾರ್ಹ. ತಾಂತ್ರಿಕವಾಗಿ ಮತ್ತು ನಿಯಮಾವಳಿಗಳ ಪ್ರಕಾರ ಇದು ಗಡಿ ಉಲ್ಲಂಘನೆಯಂತೆ ಕಂಡರೂ, ಕೇವಲ ಹವಾಮಾನದ ವೈಪರೀತ್ಯ ಮತ್ತು ಪ್ರಯಾಣಿಕರ ಪ್ರಾಣ ರಕ್ಷಣೆಯ ಕಾರಣದಿಂದಾಗಿ ಈ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.