ಕೇರಳಮ್ : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕುಸಿದ ತಕ್ಷಣವೇ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಕೇಂದ್ರ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ. ಕೇರಳದ ತ್ರಿಶೂರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಮಾರುಕಟ್ಟೆಯ ದರ ಇಳಿಕೆಗೂ ಭಾರತದ ಇಂಧನ ದರ ಪರಿಷ್ಕರಣೆಗೂ ಇರುವ ತಾಂತ್ರಿಕ ಹಾಗೂ ಪ್ರಾಯೋಗಿಕ ತೊಂದರೆಗಳನ್ನು ಬಿಚ್ಚಿಟ್ಟರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ಕಚ್ಚಾ ತೈಲ ಸಿಕ್ಕ ತಕ್ಷಣ ಅದು ಭಾರತಕ್ಕೆ ತಲುಪುವುದಿಲ್ಲ. ಆ ತೈಲವು ಹೊರ್ಮುಜ್ ಜಲಸಂಧಿಯ ಮೂಲಕವೇ ಭಾರತಕ್ಕೆ ರವಾನೆಯಾಗಬೇಕಿರುತ್ತದೆ. ಈ ಪ್ರಮುಖ ಜಲಮಾರ್ಗದಲ್ಲಿ ಹಡಗುಗಳ ಸಂಚಾರ ದಟ್ಟಣೆ ಅತ್ಯಂತ ಹೆಚ್ಚಾಗಿರುವುದರಿಂದ, ಕಚ್ಚಾ ತೈಲವು ಭಾರತದ ಬಂದರುಗಳನ್ನು ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸಚಿವರು ವಿವರಿಸಿದರು. ಇತ್ತೀಚೆಗಷ್ಟೇ ಇಂಧನ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹3.94 ರಷ್ಟು ಹೆಚ್ಚಳವಾಗಿದ್ದು ಸಾರ್ವಜನಿಕರ ಮೇಲೆ ಪರಿಣಾಮ ಬೀರಿದೆ ನಿಜ. ಆದರೆ, ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ತಕ್ಷಣವೇ ದೇಶದಲ್ಲಿ ದರ ಪರಿಷ್ಕರಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಮಧ್ಯಪ್ರಾಚ್ಯ ಯುದ್ಧದ ಪರಿಸ್ಥಿತಿ ಆರಂಭವಾದಾಗಿನಿಂದ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿತ್ತು. ಇದರಿಂದಾಗಿ ದೇಶದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಭಾರಿ ಪ್ರಮಾಣದ ಆರ್ಥಿಕ ನಷ್ಟ ಮತ್ತು ತೊಂದರೆಗೆ ಸಿಲುಕಿದ್ದವು. ಈ ಸಂದರ್ಭದಲ್ಲಿ ತೈಲ ಕಂಪನಿಗಳ ಮೇಲಿನ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಸುಮಾರು ₹12,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಭರಿಸಿದೆ ಎಂದು ಸುರೇಶ್ ಗೋಪಿ ಈ ವೇಳೆ ನೆನಪಿಸಿದರು. ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿದ್ದಾಗ ಯಾವುದೇ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ವ್ಯಾಟ್ (VAT) ಅಥವಾ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಜನಸಾಮಾನ್ಯರಿಗೆ ನೆರವಾಗಲು ತಮ್ಮ ಆದಾಯವನ್ನು ಬಿಟ್ಟುಕೊಡಲು ಸಿದ್ಧವಾಗಲಿಲ್ಲ. ದೇಶ ಮುನ್ನಡೆಯಲು ಕೇಂದ್ರ ಸರ್ಕಾರಕ್ಕೂ ಆದಾಯ ಬೇಕು ಮತ್ತು ನಮಗೆ ಇಂಧನ ನೀಡುವ ತೈಲ ಕಂಪನಿಗಳೂ ಆರ್ಥಿಕವಾಗಿ ಉಳಿಯಬೇಕು ಎಂದು ಸಚಿವರು ಪ್ರತಿಪಾದಿಸಿದರು.