image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮತದಾರರ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳ ಶಂಕೆ: ತಕ್ಷಣ ಮಾಹಿತಿ ನೀಡಲು ರಾಜ್ಯಗಳಿಗೆ ಚುನಾವಣಾ ಆಯೋಗ ಸೂಚನೆ

ಮತದಾರರ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳ ಶಂಕೆ: ತಕ್ಷಣ ಮಾಹಿತಿ ನೀಡಲು ರಾಜ್ಯಗಳಿಗೆ ಚುನಾವಣಾ ಆಯೋಗ ಸೂಚನೆ

ನವದೆಹಲಿ : ​ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯಲ್ಲಿ ವಿದೇಶಿ ಪ್ರಜೆಗಳು ಸೇರಿರುವ ಬಗ್ಗೆ ಶಂಕೆ ವ್ಯಕ್ತವಾದರೆ, ತಕ್ಷಣವೇ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಗೆ ಮಾಹಿತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕುರಿತು ಮೇ 14 ರಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಆದೇಶ ರವಾನಿಸಲಾಗಿದ್ದು, ಯಾವ ಮತದಾರರ ಗಣತಿ ನಮೂನೆಗಳು ಹಿಂತಿರುಗಿ ಬಂದಿಲ್ಲವೋ ಅಂತಹ ಪ್ರಕರಣಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಒ) ನೆರೆಹೊರೆಯವರಿಂದ ವಿಚಾರಣೆ ನಡೆಸಬೇಕು ಎಂದು ತಾಕೀತು ಮಾಡಲಾಗಿದೆ. ಮತದಾರರು ಇಲ್ಲದಿರುವುದು, ವಾಸಸ್ಥಳ ಬದಲಾವಣೆ, ಮರಣ ಅಥವಾ ನಕಲಿ ದಾಖಲಾತಿಯೇ ಎಂಬುದನ್ನು ಪತ್ತೆಹಚ್ಚಿ ದೃಢೀಕರಿಸಲು ಸೂಚಿಸಲಾಗಿದೆ. ಕಳೆದ ವರ್ಷ ಬಿಹಾರದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್‌ನ ಹಲವು ಪ್ರಜೆಗಳು ಪತ್ತೆಯಾಗಿದ್ದರು. ಆದರೆ ಈ ಕುರಿತ ನಿಖರ ದಾಖಲೆಗಳನ್ನು ಚುನಾವಣಾ ಆಯೋಗ ಹಂಚಿಕೊಳ್ಳದ ಕಾರಣ, ಪ್ರತಿಪಕ್ಷಗಳು ಇದನ್ನು ವಿರೋಧಿಸಿದ್ದವು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಪರವಾಗಿಲ್ಲದ ಮತದಾರರನ್ನು ಗುರಿಯಾಗಿಸಲು ಎಸ್‌ಐಆರ್​ನ ತಂತ್ರ ಹೂಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು.

​ಮೊದಲೆರಡು ಹಂತಗಳಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡಿದ್ದು, ಮೇ 30 ರಿಂದ ಮೂರನೇ ಹಂತದಲ್ಲಿ ಒಟ್ಟು 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ದೆಹಲಿ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ತೆಲಂಗಾಣ, ಪಂಜಾಬ್, ಕರ್ನಾಟಕ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ನಾಗಾಲ್ಯಾಂಡ್, ತ್ರಿಪುರ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುನಲ್ಲಿ ಪ್ರಸ್ತುತ ಪರಿಷ್ಕರಣೆ ನಡೆಯುತ್ತಿದ್ದು, ಈ ಪೈಕಿ ಕರ್ನಾಟಕ, ಪಂಜಾಬ್, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಪ್ರತಿಪಕ್ಷಗಳ ಆಡಳಿತವಿದೆ. ಈ ಬೃಹತ್ ಕಾರ್ಯಕ್ಕಾಗಿ 3.94 ಲಕ್ಷಕ್ಕೂ ಹೆಚ್ಚು ಬಿಎಲ್‌ಒಗಳನ್ನು ನೇಮಿಸಲಾಗಿದ್ದು, ಇವರು 36.73 ಕೋಟಿ ಮತದಾರರ ಮನೆ ಮನೆಗೆ ತೆರಳಿ ದಾಖಲೆಗಳನ್ನು ಕಲೆಹಾಕುತ್ತಿದ್ದಾರೆ. ಇವರಿಗೆ ರಾಜಕೀಯ ಪಕ್ಷಗಳು ನೇಮಿಸಿದ 3.42 ಲಕ್ಷ ಬೂತ್ ಮಟ್ಟದ ಏಜೆಂಟರು (BLAs) ಕೂಡ ಸಹಾಯ ಮಾಡಲಿದ್ದಾರೆ. ಹಿಮಪಾತ ಸಂಭವಿಸಲಿರುವ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಎಸ್‌ಐಆರ್ ವೇಳಾಪಟ್ಟಿಯನ್ನು ನಂತರ ಪ್ರಕಟಿಸುವುದಾಗಿ ಆಯೋಗ ತಿಳಿಸಿದೆ. ವಿವಿಧ ಕಾರಣಗಳಿಂದಾಗಿ ಈ ಎಸ್‌ಐಆರ್ ವೇಳಾಪಟ್ಟಿಗಳಲ್ಲಿ ಪದೇ ಪದೇ ಬದಲಾವಣೆಗಳಾಗಿದ್ದು, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಕ್ರಿಯೆಯನ್ನು ಪ್ರಶ್ನಿಸಿ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ನಡೆಯುತ್ತಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ವಿರುದ್ಧ ಸುಪ್ರೀಂ ಕೋರ್ಟ್​ ಪೀಠದ ಮುಂದೆ ಖುದ್ದಾಗಿ ವಾದ ಮಂಡಿಸಿದ್ದರು.

Category
ಕರಾವಳಿ ತರಂಗಿಣಿ