image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಶಕಗಳ ಬಳಿಕ ಮೇ ತಿಂಗಳಲ್ಲಿ ಶೂನ್ಯ ಸಾವು: ಉಗ್ರಗಾಮಿ ಕೃತ್ಯ ಇಹಾಸದಲ್ಲೇ ದಾಖಲೆಯ ಕುಸಿತ

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಶಕಗಳ ಬಳಿಕ ಮೇ ತಿಂಗಳಲ್ಲಿ ಶೂನ್ಯ ಸಾವು: ಉಗ್ರಗಾಮಿ ಕೃತ್ಯ ಇಹಾಸದಲ್ಲೇ ದಾಖಲೆಯ ಕುಸಿತ

ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಶಕಗಳ ಹಿಂದೆ ಭಯೋತ್ಪಾದನೆ ಭುಗಿಲೆದ್ದ ಬಳಿಕ ಇದೇ ಮೊದಲ ಬಾರಿಗೆ ಕಳೆದ ಮೇ ತಿಂಗಳಿನಲ್ಲಿ ಒಂದೇ ಒಂದು ಭಯೋತ್ಪಾದನೆಗೆ ಸಂಬಂಧಿಸಿದ ಸಾವುಗಳು ಸಂಭವಿಸಿಲ್ಲ. ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಕಣಿವೆಯಲ್ಲಿ ಹಿಂಸಾಚಾರದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಸಾವುಗಳು ವರದಿಯಾಗಿವೆ. 2026ರ ಮೊದಲ ಐದು ತಿಂಗಳಲ್ಲಿ ಕೇವಲ 12 ಭಯೋತ್ಪಾದನೆಗೆ ಸಂಬಂಧಿಸಿದ ಸಾವುಗಳು ದಾಖಲಾಗಿರುವುದು ಅಧಿಕೃತ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅದರಲ್ಲಿ ಒಂಬತ್ತು ಭಯೋತ್ಪಾದಕರು, ಒಬ್ಬ ಭದ್ರತಾ ಪಡೆ ಸಿಬ್ಬಂದಿ, ಒಬ್ಬ ವಿವಾದಿತ ಹಿನ್ನೆಲೆಯುಳ್ಳ ಸ್ಥಳೀಯ ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ ಸೇರಿದ್ದಾರೆ. ಅತ್ಯಂತ ಸಮಾಧಾನಕರ ಸಂಗತಿಯೆಂದರೆ, ಈ ವರ್ಷ ಇದುವರೆಗೆ ಯಾವುದೇ ನಾಗರಿಕರ ಸಾವುಗಳು ವರದಿಯಾಗಿಲ್ಲ.

ಜಮ್ಮುಕಾಶ್ಮೀರ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 2000ನೇ ಇಸವಿಯ ಮೇ ತಿಂಗಳಿನಲ್ಲಿ 288 ಮತ್ತು 2001ರ ಮೇ ತಿಂಗಳಲ್ಲಿ 300 ಭಯೋತ್ಪಾದನೆಗೆ ಸಂಬಂಧಿಸಿದ ಸಾವು-ನೋವುಗಳು ಸಂಭವಿಸಿದ್ದವು. 2001ರ ಅವಧಿಯು ಈ ಸಂಘರ್ಷದ ಅತ್ಯಂತ ಮಾರಕ ವರ್ಷಗಳಲ್ಲಿ ಒಂದಾಗಿತ್ತು. ಆ ಸಮಯದಲ್ಲಿ ಹತ್ಯೆಗಳು ಬಹುತೇಕ ದೈನಂದಿನ ಘಟನೆಗಳಂತಾಗಿದ್ದವು. ನಾಗರಿಕರು, ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ಕಣಿವೆ ಮತ್ತು ಜಮ್ಮುವಿನ ಕೆಲವು ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದರು. ತದನಂತರದ ವರ್ಷಗಳ ಮೇ ತಿಂಗಳ ಹತ್ಯೆಗಳ ಸಂಖ್ಯೆಯನ್ನು ಗಮನಿಸಿದರೆ, 2002ರಲ್ಲಿ 288, 2003ರಲ್ಲಿ 241, 2004ರಲ್ಲಿ 195, 2005ರಲ್ಲಿ 188 ಮತ್ತು 2006ರಲ್ಲಿ 140 ಸಾವುಗಳು ಸಂಭವಿಸಿದ್ದವು. ಭಯೋತ್ಪಾದನೆ ಹೆಚ್ಚುತ್ತಿದ್ದಂತೆ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ನಂತರದ ವರ್ಷಗಳ ಸಾವಿನ ಸಂಖ್ಯೆಗಳಲ್ಲಿ ಏರಿಳಿತ ಕಂಡುಬಂದಿದೆ. 2007ರಲ್ಲಿ 59, 2008ರಲ್ಲಿ 39, 2009ರಲ್ಲಿ 27, 2010ರಲ್ಲಿ 43, 2011ರಲ್ಲಿ 19 ಮತ್ತು 2012ರ ಮೇನಲ್ಲಿ ಈ ಸಂಖ್ಯೆ 13ಕ್ಕೆ ಇಳಿದಿತ್ತು.

ಮುಂದಿನ ದಿನಗಳಲ್ಲಿ 2013ರಲ್ಲಿ 18, 2014ರಲ್ಲಿ 10 ಮತ್ತು 2015ರಲ್ಲಿ 16 ಹತ್ಯೆಗಳು ದಾಖಲಾಗಿವೆ. ಆದರೆ 2016ರ ಅಶಾಂತಿಯ ಬಳಿಕ ಹಿಂಸಾಚಾರ ಮತ್ತೆ ಹೆಚ್ಚಾಗಿದ್ದು, ಆ ವರ್ಷದ ಮೇ ತಿಂಗಳಲ್ಲಿ ಸುಮಾರು 27 ಸಾವು-ನೋವುಗಳು ಸಂಭವಿಸಿದರೆ, 2017, 2018 ಮತ್ತು 2019ರ ಮೇ ತಿಂಗಳಲ್ಲಿ ಪ್ರತಿ ವರ್ಷ ತಲಾ 37 ಹತ್ಯೆಗಳು ದಾಖಲಾಗಿವೆ. ತದನಂತರದ ವರ್ಷಗಳಲ್ಲಿ ಮತ್ತೊಮ್ಮೆ ಸಾವು ಇಳಿಕೆಯಾಯಿತು. 2020ರ ಮೇ ತಿಂಗಳಲ್ಲಿ 28, 2021ರಲ್ಲಿ 16, 2022ರಲ್ಲಿ 38, 2023ರಲ್ಲಿ 14, 2024ರಲ್ಲಿ 7 ಮತ್ತು 2025ರಲ್ಲಿ 43 ಸಾವುಗಳು ಸಂಭವಿಸಿದ್ದವು. ಆದರೆ ಈ ವರ್ಷ ಅಂದರೆ 2026ರ ಮೇ ತಿಂಗಳ ಅಂಕಿ-ಅಂಶಗಳು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿದಿವೆ. ನಿರಂತರ ಉಗ್ರರ ನಿಗ್ರಹ ಕಾರ್ಯಾಚರಣೆಗಳು, ವಿವಿಧ ದಳಗಳ ನಡುವಿನ ಗುಪ್ತಚರ ಸಮನ್ವಯ ಮತ್ತು ಸ್ಥಳೀಯ ಉಗ್ರಗಾಮಿಗಳ ನೇಮಕಾತಿಯಲ್ಲಿ ತೀವ್ರ ಕುಸಿತ ಉಂಟಾಗಿರುವುದು ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣ ಎಂದು ಭದ್ರತಾ ಅಧಿಕಾರಿಗಳು ಹೇಳುತ್ತಾರೆ. ಭಯೋತ್ಪಾದಕ ಗುಂಪುಗಳಿಗೆ ಲಭ್ಯವಿರುವ ಬೆಂಬಲ ಹಾಗೂ ಒಟ್ಟಾರೆ ಪರಿಸರ ವ್ಯವಸ್ಥೆಯು ಗಮನಾರ್ಹವಾಗಿ ಕುಗ್ಗಿದ್ದು, ಗಡಿಯಲ್ಲಿ ಒಳನುಸುಳುವಿಕೆ ಹೆಚ್ಚು ಕಷ್ಟಕರವಾಗಿದೆ.

ಒಟ್ಟಾರೆ ವಾರ್ಷಿಕ ಸಾವು-ನೋವುಗಳ ಇತಿಹಾಸವನ್ನು ಗಮನಿಸಿದರೆ, ಭಯೋತ್ಪಾದಕ ಸಂಘರ್ಷದ ಆರಂಭಿಕ ವರ್ಷಗಳಲ್ಲಿ ವಾರ್ಷಿಕ ಸಾವು-ನೋವುಗಳು 3,000ಕ್ಕಿಂತ ಹೆಚ್ಚಿರುತ್ತಿದ್ದವು. 2000ರಲ್ಲಿ 2,799 ಸಾವುಗಳು ದಾಖಲಾಗಿದ್ದರೆ, 2001ರಲ್ಲಿ ಈ ಸಂಖ್ಯೆ 4,011ಕ್ಕೆ ಏರಿತ್ತು. ಆ ವರ್ಷವೊಂದರಲ್ಲೇ 1,000ಕ್ಕೂ ಹೆಚ್ಚು ನಾಗರಿಕರು, 628 ಭದ್ರತಾ ಸಿಬ್ಬಂದಿ ಮತ್ತು 2,345 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರು. ಬಳಿಕ ಈ ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಾ ಬಂದು 2002ರಲ್ಲಿ 3,098, 2003ರಲ್ಲಿ 2,507, 2004ರಲ್ಲಿ 1,789 ಮತ್ತು 2005ರಲ್ಲಿ 1,717 ಸಾವುಗಳು ಸಂಭವಿಸಿದ್ದವು. ಮುಂದಿನ ವರ್ಷಗಳಲ್ಲಿ ಇದು ಮತ್ತಷ್ಟು ಇಳಿಮುಖವಾಗಿ 2006ರಲ್ಲಿ 1,125, 2007ರಲ್ಲಿ 744, 2008ರಲ್ಲಿ 538, 2009ರಲ್ಲಿ 373, 2010ರಲ್ಲಿ 361 ಮತ್ತು 2011ರಲ್ಲಿ 181ಕ್ಕೆ ಇಳಿದವು. 2012ರ ಹೊತ್ತಿಗೆ ವಾರ್ಷಿಕ ಸಾವು ಸುಮಾರು 121ಕ್ಕೆ ಇಳಿಕೆ ಕಂಡಿತ್ತು.

ನಂತರದ ವರ್ಷಗಳಾದ 2013, 2014 ಮತ್ತು 2015ರಲ್ಲಿ ಕ್ರಮವಾಗಿ 172, 189 ಮತ್ತು 175 ಸಾವುಗಳು ದಾಖಲಾಗುವುದರೊಂದಿಗೆ ಮತ್ತೆ ಕೊಂಚ ಏರಿಕೆ ಕಂಡುಬಂತು. ಸ್ಥಳೀಯ ಉಗ್ರಗಾಮಿತ್ವವು ಪುನಾರಂಭಗೊಂಡಿದ್ದರಿಂದ ಸಾವು-ನೋವುಗಳು 2016ರಲ್ಲಿ 267, 2017ರಲ್ಲಿ 357 ಮತ್ತು 2018ರಲ್ಲಿ 452ಕ್ಕೆ ದಿಢೀರ್​ ಏರಿತು. ಆದರೂ, ಅಂದಿನಿಂದ ಹಿಂಸಾಚಾರವು ಸ್ಥಿರವಾಗಿ ಕಡಿಮೆಯಾಗಿದೆ. ವಾರ್ಷಿಕ ಸಂಖ್ಯೆ 2019ರಲ್ಲಿ 283, 2020ರಲ್ಲಿ 321, 2021ರಲ್ಲಿ 274 ಮತ್ತು 2022ರಲ್ಲಿ 253ರಷ್ಟಿತ್ತು. ಇದು 2023ರಲ್ಲಿ 134 ಮತ್ತು 2024ರಲ್ಲಿ 127ಕ್ಕೆ ತೀವ್ರವಾಗಿ ಕುಸಿದಿದೆ. 2025ರ ಅಂತ್ಯದ ವೇಳೆಗೆ ವಾರ್ಷಿಕ ಸಾವಿನ ಸಂಖ್ಯೆ 121ಕ್ಕೆ ಇಳಿದಿದೆ.

2026ರ ಮೊದಲ ಐದು ತಿಂಗಳುಗಳು ಇದುವರೆಗೆ ಇತಿಹಾಸದಲ್ಲೇ ದಾಖಲಾದ ಅತ್ಯಂತ ಕಡಿಮೆ ಸಾವು-ನೋವುಗಳ ಅವಧಿಯಾಗಿದೆ. 2001ರಲ್ಲಿ 1,024 ನಾಗರಿಕರು ಸಾವನ್ನಪ್ಪಿದ್ದರೆ, 2026ರಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಯಲ್ಲಿ ಯಾವುದೇ ನಾಗರಿಕರು ಸಾವನ್ನಪ್ಪಿಲ್ಲ. ಭದ್ರತಾ ಪಡೆಗಳ ಸಾವು-ನೋವುಗಳು 2001ರಲ್ಲಿ 628ರಿಂದ ಈ ವರ್ಷ ಕೇವಲ ಒಂದಕ್ಕೆ ಇಳಿದಿದೆ. ಭಯೋತ್ಪಾದಕರ ಸಾವುಗಳು 2,345ರಿಂದ ಈಗ 9ಕ್ಕೆ ತಗ್ಗಿದೆ. ಸಾವು-ನೋವುಗಳು ಗಣನೀಯವಾಗಿ ಇಳಿಕೆಯಾಗಿದ್ದರೂ ಕೂಡ ಉಗ್ರಗಾಮಿ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿಲ್ಲ ಮತ್ತು ಭಯೋತ್ಪಾದನೆಯನ್ನು ಪುನಾರಂಭಿಸುವ ಪ್ರಯತ್ನಗಳು ಮುಂದುವರೆಯುತ್ತಲೇ ಇವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಮೇ ತಿಂಗಳಲ್ಲಿ ಶೂನ್ಯ ಹತ್ಯೆಗಳು ದಾಖಲಾದರೂ ಸಹ, ಭದ್ರತಾ ಪಡೆಗಳು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಪ್ರದೇಶದ ಕೆಲವೆಡೆ ತೀವ್ರ ಶೋಧ ಕಾರ್ಯಾಚರಣೆಗಳನ್ನು ಮುಂದುವರೆಸಿದ್ದಾರೆ.

Category
ಕರಾವಳಿ ತರಂಗಿಣಿ