ಚೆನ್ನೈ : ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲು ಮುಂದಾಗಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತೀವ್ರವಾಗಿ ವಿರೋಧಿಸಿದ್ದಾರೆ. ಕರ್ನಾಟಕದ ಈ ನಡೆ ಸರ್ವೋಚ್ಚ ನ್ಯಾಯಾಲಯ ಹಾಗೂ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಹೊಸ ಜಲಾಶಯ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೇ ಭೂಮಿ ಪೂಜೆ (ಗುದ್ದಲಿ ಪೂಜೆ) ನೆರವೇರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹೊರಬೀಳುತ್ತಿದ್ದಂತೆ ತಮಿಳುನಾಡಿನಲ್ಲಿ ರಾಜಕೀಯ ಮತ್ತು ಕಾನೂನಾತ್ಮಕ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜಲ ತಜ್ಞರು, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚೆನ್ನೈನ ಸಚಿವಾಲಯದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದಾರೆ. ತಮಿಳುನಾಡಿನ ರೈತರ ಹಿತರಕ್ಷಣೆ ಮತ್ತು ರಾಜ್ಯದ ಜಲ ಹಕ್ಕುಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂದಿನ ಕಾನೂನು ಕ್ರಮಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಅಧಿಕೃತ ಹೇಳಿಕೆ ನೀಡಿರುವ ಮುಖ್ಯಮಂತ್ರಿ ವಿಜಯ್, ಕಾವೇರಿ ಜಲಾನಯನ ಪ್ರದೇಶವು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಲಭ್ಯವಿರುವ ನೀರನ್ನು ಹಂಚಿಕೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕವು ತಮಿಳುನಾಡು ಗಡಿಯ ಸಮೀಪ 67.16 ಟಿಎಂಸಿ ಸಾಮರ್ಥ್ಯದ ಬೃಹತ್ ಜಲಾಶಯ ನಿರ್ಮಿಸಲು ಹೊರಟಿರುವುದು ತಮಿಳುನಾಡಿಗೆ ಹರಿಯಬೇಕಾದ ನೈಸರ್ಗಿಕ ನೀರಿನ ಹರಿವನ್ನು ತಡೆಯುತ್ತದೆ. ಈ ಹೊಸ ಪ್ರಸ್ತಾವನೆಯು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದ್ದು, ಕೇಂದ್ರ ಸರ್ಕಾರವು ಕರ್ನಾಟಕ ಸಲ್ಲಿಸಲಿರುವ ಹೊಸ ಡಿಪಿಆರ್ ಅನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸದೆ ತಕ್ಷಣವೇ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ನ್ಯಾಯಾಲಯದ ಆದೇಶಗಳನ್ನು ಗೌರವಿಸುವಂತೆ ಕರ್ನಾಟಕಕ್ಕೆ ಕಟ್ಟುನಿಟ್ಟಿನ ಸಲಹೆ ನೀಡಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.