ಚೆನ್ನೈ : ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ನಟ, ರಾಜಕಾರಣಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯದ ಮದ್ಯದ ನೀತಿಯಲ್ಲಿ ಮಹತ್ವದ ಬದಲಾವಣೆ ತರುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದಾದ್ಯಂತ ಇರುವ 717 ಸರ್ಕಾರಿ ಸ್ವಾಮ್ಯದ ಟಾಸ್ಮ್ಯಾಕ್ (TASMAC) ಮದ್ಯದ ಮಳಿಗೆಗಳನ್ನು ಮುಚ್ಚುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ನಿಲ್ದಾಣಗಳ ಬಳಿ ಇರುವ ಮದ್ಯದ ಅಂಗಡಿಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ವಿಜಯ್ ಸೂಚಿಸಿದ್ದರು. ಈ ಸಮೀಕ್ಷೆಯ ವರದಿಯ ಅನ್ವಯ, ನಿಗದಿತ ಸ್ಥಳಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿಗಳನ್ನು ಎರಡು ವಾರದೊಳಗೆ ಮುಚ್ಚಲು ಗಡುವು ನೀಡಲಾಗಿದೆ. ಈ ಆದೇಶದ ಅನ್ವಯ ಧಾರ್ಮಿಕ ಕೇಂದ್ರಗಳ ಬಳಿ ಇರುವ 276, ಶಾಲೆ-ಕಾಲೇಜುಗಳ ಸಮೀಪವಿರುವ 186 ಹಾಗೂ ಬಸ್ ನಿಲ್ದಾಣಗಳ ಹತ್ತಿರವಿರುವ 255 ಮಳಿಗೆಗಳಿಗೆ ಬೀಗ ಬೀಳಲಿದೆ.
ತಮಿಳುನಾಡಿನಲ್ಲಿ ಮದ್ಯದ ಮಾರಾಟವು ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲಿರುವ ಟಾಸ್ಮ್ಯಾಕ್ ಸಂಸ್ಥೆಯ ಮೂಲಕವೇ ನಡೆಯುತ್ತದೆ. 1983ರಲ್ಲಿ ಅಂದಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಅವಧಿಯಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಖಾಸಗಿಯವರಿಗೆ ಮದ್ಯದ ಅಂಗಡಿ ತೆರೆಯಲು ಅವಕಾಶವಿಲ್ಲ. ಪ್ರಸ್ತುತ ರಾಜ್ಯದಲ್ಲಿ ಸುಮಾರು 4,700 ಮಳಿಗೆಗಳಿದ್ದು, ಇವು ಸರ್ಕಾರದ ಪ್ರಮುಖ ಆದಾಯದ ಮೂಲಗಳಾಗಿವೆ. ಕಳೆದ 2024-25ರ ಆರ್ಥಿಕ ವರ್ಷದಲ್ಲಿ ಟಾಸ್ಮ್ಯಾಕ್ ಮೂಲಕ ಸರ್ಕಾರಕ್ಕೆ ಸುಮಾರು 48,344 ಕೋಟಿ ರೂಪಾಯಿ ಆದಾಯ ಹರಿದುಬಂದಿತ್ತು.
ಹೆಚ್ಚಿನ ಆದಾಯ ತಂದುಕೊಡುವ ಮೂಲವಾಗಿದ್ದರೂ ಸಹ, ಸಾರ್ವಜನಿಕರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಸುರಕ್ಷತೆ ಮತ್ತು ನೆಮ್ಮದಿಯ ದೃಷ್ಟಿಯಿಂದ ಮುಖ್ಯಮಂತ್ರಿ ವಿಜಯ್ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬರುವ ಭಕ್ತಾದಿಗಳಿಗೆ ಮದ್ಯದ ಅಂಗಡಿಗಳಿಂದ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ಈ ನಿರ್ಧಾರ ಪೂರಕವಾಗಿದ್ದು, ಮಹಿಳಾ ವರ್ಗದಿಂದ ಈ ಯೋಜನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುವ ನಿರೀಕ್ಷೆಯಿದೆ.