image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸನಾತನ ಧರ್ಮ ನಿರ್ಮೂಲನೆಯಾಗಲಿ: ವಿಧಾನಸಭೆಯಲ್ಲಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್

ಸನಾತನ ಧರ್ಮ ನಿರ್ಮೂಲನೆಯಾಗಲಿ: ವಿಧಾನಸಭೆಯಲ್ಲಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್

ಚೆನ್ನೈ : ​ತಮಿಳುನಾಡಿನ ರಾಜಕೀಯ ರಣರಂಗದಲ್ಲಿ ಸನಾತನ ಧರ್ಮದ ಕುರಿತಾದ ಚರ್ಚೆ ಮತ್ತೆ ಕಿಚ್ಚು ಹಚ್ಚಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ನೂತನ ವಿಧಾನಸಭೆಯ ಮೊದಲ ಅಧಿವೇಶನದಲ್ಲೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ನಿನ್ನೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು, ಇಂದು ಸದನದಲ್ಲಿ ವಿರೋಧ ಪಕ್ಷದ ನಾಯಕನಾಗಿ ತಮ್ಮ ಮೊದಲ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನೂತನ ಮುಖ್ಯಮಂತ್ರಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುತ್ತಲೇ ಸನಾತನ ಧರ್ಮದ ವಿರುದ್ಧ ಗುಡುಗಿದ್ದಾರೆ. "ತಮಿಳು ಏಳ್ಗೆ, ತಮಿಳುನಾಡ ಬಾಳ್ಗೆ, ಜನರನ್ನು ವಿಭಜಿಸುವ ಸನಾತನ ಧರ್ಮ ಖಂಡಿತ ನಿರ್ಮೂಲನೆ ಆಗಬೇಕು" ಎಂದು ಹೇಳುವ ಮೂಲಕ ತಮ್ಮ ಭಾಷಣ ಮುಕ್ತಾಯಗೊಳಿಸಿದ್ದು, ಇದು ಸದನದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ಮೂರು ವರ್ಷಗಳ ಹಿಂದೆ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ, ಅಂದು ದೇಶಾದ್ಯಂತ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿದ್ದರು. ಅಯೋಧ್ಯೆಯ ಪರಮಹಂಸ ಆಚಾರ್ಯರಂತಹ ಧರ್ಮಗುರುಗಳಿಂದ ಜೀವ ಬೆದರಿಕೆ ಹಾಗೂ ಸುಪ್ರೀಂ ಕೋರ್ಟ್‌ನಿಂದ ಕಟು ಟೀಕೆಗಳನ್ನು ಎದುರಿಸಿದ್ದರೂ, ಉದಯನಿಧಿ ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ ಎಂಬುದು ಇಂದಿನ ಭಾಷಣದಿಂದ ಸ್ಪಷ್ಟವಾಗಿದೆ. ಅಂದು ಸುಪ್ರೀಂ ಕೋರ್ಟ್ "ಸಚಿವರ ಸ್ಥಾನದಲ್ಲಿರುವವರು ಇಂತಹ ಜವಾಬ್ದಾರಿಯಿಲ್ಲದ ಹೇಳಿಕೆ ನೀಡಬಹುದೇ?" ಎಂದು ಪ್ರಶ್ನಿಸಿತ್ತಾದರೂ, ಉದಯನಿಧಿ ಮಾತ್ರ ಮಹಿಳೆಯರ ಮೇಲಿನ ಶೋಷಣೆಯ ವಿರುದ್ಧ ತಾವು ಮಾತನಾಡುತ್ತಿರುವುದಾಗಿ ಸಮರ್ಥಿಸಿಕೊಂಡಿದ್ದರು.

​ದಶಕಗಳ ಕಾಲ ತಮಿಳುನಾಡನ್ನು ಆಳಿದ್ದ ದ್ರಾವಿಡ ಪಕ್ಷಗಳನ್ನು ಬದಿಗೊತ್ತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಧಿಕಾರ ಹಿಡಿದಿರುವುದು ರಾಜ್ಯದ ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆದಿದೆ. ಆದರೆ, ಸಿಎಂ ವಿಜಯ್ ಅವರ ಧಾರ್ಮಿಕ ಹಿನ್ನೆಲೆ ಹಾಗೂ ಬಿಜೆಪಿ ವಿರೋಧಿ ಎಂಬ ಹಣೆಪಟ್ಟಿಯ ನಡುವೆ, ಉದಯನಿಧಿ ಸ್ಟಾಲಿನ್ ನೀಡಿರುವ ಈ ಹೇಳಿಕೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಉದಯನಿಧಿ ಅವರ ಮಾತಿಗೆ ಸಿಎಂ ವಿಜಯ್ ಕೈಮುಗಿದು ಪ್ರತಿಕ್ರಿಯಿಸಿದರಾದರೂ, ಸನಾತನ ಧರ್ಮದ ಕುರಿತಾದ ಈ ಹಳೆಯ ವಿವಾದ ಈಗ ಹೊಸ ಸರ್ಕಾರದ ಅವಧಿಯಲ್ಲೂ ಮುನ್ನೆಲೆಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Category
ಕರಾವಳಿ ತರಂಗಿಣಿ