image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಜುಲೈ 1ರಿಂದ 'ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್' ಜಾರಿ

ಜುಲೈ 1ರಿಂದ 'ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್' ಜಾರಿ

ನವದೆಹಲಿ : ​ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ನಡುವೆ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಇತಿಹಾಸದ ಪುಟ ಸೇರಲಿದ್ದು, ಅದರ ಬದಲಿಗೆ ಹೊಸದಾಗಿ ರೂಪಿಸಲಾಗಿರುವ 'ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)' ಅಥವಾ 'ವಿಬಿ-ಜಿ-ರಾಮ್‌ಜಿ' ಕಾಯ್ದೆಯು ಜುಲೈ 1ರಿಂದ ದೇಶಾದ್ಯಂತ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಮಹತ್ವದ ಘೋಷಣೆ ಮಾಡಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಜುಲೈ 1ರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಹೊಸ ಕಾಯ್ದೆ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ 2005ರಿಂದ ಅಸ್ತಿತ್ವದಲ್ಲಿದ್ದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಗ್ಯಾರಂಟಿ ಕಾಯ್ದೆಯು ರದ್ದಾಗಲಿದ್ದು, ಜೂನ್ 30ರವರೆಗೆ ನಡೆಯುವ ನರೇಗಾ ಕಾಮಗಾರಿಗಳನ್ನು ಬಾಕಿ ಉಳಿಸಿ ಹೊಸ ಚೌಕಟ್ಟಿಗೆ ವರ್ಗಾಯಿಸಲು ಸೂಚಿಸಲಾಗಿದೆ.

​ಕಾರ್ಮಿಕರ ಹಿತದೃಷ್ಟಿಯಿಂದ ಹಳೆಯ ಇ-ಕೆವೈಸಿ ಹೊಂದಿರುವ ನರೇಗಾ ಉದ್ಯೋಗ ಕಾರ್ಡ್‌ಗಳು ಹೊಸ 'ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್‌'ಗಳನ್ನು ನೀಡುವವರೆಗೆ ಮಾನ್ಯವಾಗಿರಲಿವೆ ಎಂದು ಸರ್ಕಾರ ತಿಳಿಸಿದೆ. ಇ-ಕೆವೈಸಿ ಬಾಕಿ ಇರುವ ಕಾರ್ಮಿಕರಿಗೆ ಕೆಲಸ ಪಡೆಯಲು ಯಾವುದೇ ಅಡ್ಡಿಯಾಗುವುದಿಲ್ಲ ಮತ್ತು ಹೊಸದಾಗಿ ನೋಂದಣಿ ಮಾಡಿಕೊಳ್ಳುವವರಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಕ್ರಿಯೆ ಮುಂದುವರಿಯಲಿದೆ. ವೇತನ ಪಾವತಿ, ಕುಂದುಕೊರತೆ ಪರಿಹಾರ ಮತ್ತು ಅನುದಾನ ಹಂಚಿಕೆಯ ಮಾನದಂಡಗಳ ಕುರಿತು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಕರಡು ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಅಭಿಪ್ರಾಯಕ್ಕೆ ಮುಕ್ತವಾಗಲಿದೆ. ಗ್ರಾಮ ಪಂಚಾಯಿತಿಗಳನ್ನು ಸಬಲೀಕರಿಸುವ ಮೂಲಕ ಗ್ರಾಮೀಣ ಮೂಲಸೌಕರ್ಯ ವೃದ್ಧಿ, ಹೆಚ್ಚಿನ ಉದ್ಯೋಗ ಸೃಜನೆ ಮತ್ತು ಗ್ರಾಮಸ್ಥರ ಸ್ವಾವಲಂಬನೆಯನ್ನು ಹೆಚ್ಚಿಸುವುದು ಈ ಹೊಸ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ಬಣ್ಣಿಸಿದೆ.

Category
ಕರಾವಳಿ ತರಂಗಿಣಿ