image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಾರ್ಗಿ ಅಣೆಕಟ್ಟು ಬೋಟ್ ದುರಂತ: ಮಗುವನ್ನು ಎದೆಗೆ ಬಿಗಿದಪ್ಪಿಕೊಂಡ ಸ್ಥಿತಿಯಲ್ಲೇ ತಾಯಿಯ ಸಾವು

ಬಾರ್ಗಿ ಅಣೆಕಟ್ಟು ಬೋಟ್ ದುರಂತ: ಮಗುವನ್ನು ಎದೆಗೆ ಬಿಗಿದಪ್ಪಿಕೊಂಡ ಸ್ಥಿತಿಯಲ್ಲೇ ತಾಯಿಯ ಸಾವು

ಮಧ್ಯಪ್ರದೇಶ : ಜಬಲ್ಪುರ ಸಮೀಪದ ಬಾರ್ಗಿ ಅಣೆಕಟ್ಟಿನ ಹಿನ್ನೀರಿನಲ್ಲಿ ಸಂಭವಿಸಿದ ಭೀಕರ ಕ್ರೂಸ್ ಬೋಟ್ ಅಪಘಾತದ ರಕ್ಷಣಾ ಕಾರ್ಯಾಚರಣೆಯ ವೇಳೆ ಅತ್ಯಂತ ಹೃದಯವಿದ್ರಾವಕ ದೃಶ್ಯವೊಂದು ಬೆಳಕಿಗೆ ಬಂದಿದೆ. ಆಗ್ರಾದಿಂದ ಆಗಮಿಸಿದ ವಿಶೇಷ ಡೈವಿಂಗ್ ತಂಡವು ಮುಳುಗಿದ ಬೋಟ್‌ನ ಅವಶೇಷಗಳನ್ನು ಶೋಧಿಸುವಾಗ, ತಾಯಿ ಮರೀನಾ ಮ್ಯಾಸ್ಸಿ ತನ್ನ ನಾಲ್ಕು ವರ್ಷದ ಪುತ್ರ ತ್ರಿಶಾನ್‌ನನ್ನು ಲೈಫ್ ಜಾಕೆಟ್‌ನೊಳಗೆ ಎದೆಗೆ ಬಿಗಿದಪ್ಪಿಕೊಂಡ ಸ್ಥಿತಿಯಲ್ಲೇ ಮೃತಪಟ್ಟಿರುವುದು ಪತ್ತೆಯಾಗಿದೆ. ಸಾವಿನ ಕ್ಷಣದಲ್ಲೂ ಮಗುವನ್ನು ಬಿಡದ ತಾಯಿಯ ಮಮತೆಯ ಈ ದೃಶ್ಯ ರಕ್ಷಣಾ ಸಿಬ್ಬಂದಿಯ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಬೋಟ್‌ನ ಕಿಟಕಿಯ ಬಳಿ ಸಿಲುಕಿಕೊಂಡಿದ್ದ ಈ ಇಬ್ಬರ ಮೃತದೇಹಗಳನ್ನು ಕಬ್ಬಿಣದ ಸರಳುಗಳ ಸಹಾಯದಿಂದ ಹರಸಾಹಸಪಟ್ಟು ಹೊರತೆಗೆಯಲಾಗಿದ್ದು, ಮರೀನಾ ಅವರ ಪತಿ ಪ್ರದೀಪ್ ಮತ್ತು ಮಗಳು ಸಿಯಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಗುರುವಾರ ಸಂಜೆ ಸುರಿದ ಹಠಾತ್ ಬಿರುಗಾಳಿಗೆ ಸಿಲುಕಿ ಪ್ರವಾಸೋದ್ಯಮ ಇಲಾಖೆಯ ಈ ಕ್ರೂಸ್ ಬೋಟ್ ಜಲಸಮಾಧಿಯಾಗಿದ್ದು, ದುರಂತದಲ್ಲಿ ಈವರೆಗೆ ಒಟ್ಟು 9 ಶವಗಳನ್ನು ಹೊರತೆಗೆಯಲಾಗಿದೆ. ಬೋಟ್‌ನಲ್ಲಿದ್ದ ಒಟ್ಟು 43 ರಿಂದ 47 ಪ್ರವಾಸಿಗರ ಪೈಕಿ 28 ಜನರನ್ನು ರಕ್ಷಿಸಲಾಗಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್ ಮತ್ತು ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ. ಕತ್ತಲೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಗುರುವಾರ ರಾತ್ರಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆಯು ಶುಕ್ರವಾರ ಮಧ್ಯಾಹ್ನದವರೆಗೆ ನಡೆದಿದೆ ಎಂದು ಬಾರ್ಗಿ ನಗರದ ಸಿಎಸ್‌ಪಿ ಅಂಜುಲ್ ಮಿಶ್ರಾ ತಿಳಿಸಿದ್ದಾರೆ. ಪ್ರವಾಸಿಗರ ಸಂತಸದ ಕ್ಷಣಗಳು ಕ್ಷಣಾರ್ಧದಲ್ಲಿ ಮಸಣವಾಗಿ ಮಾರ್ಪಟ್ಟಿರುವುದು ಇಡೀ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

Category
ಕರಾವಳಿ ತರಂಗಿಣಿ