ಜಮ್ಮು -ಕಾಶ್ಮೀರ: ಖಾತ್ರದ ತ್ರಿಕುಟ ಪರ್ವತ ಶ್ರೇಣಿಗಳ ಮಧ್ಯೆಯಲ್ಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರ ಸಮೂಹ ಭೇಟಿ ನೀಡುವುದು ವಿಶೇಷ. ಆದರೆ, ಇತ್ತೀಚಿನ ಪರಿಶೀಲನೆಯಲ್ಲಿ ಬೆಚ್ಚಿಬೀಳುವ ಸಂಗತಿಯೊಂದು ಹೊರಬಿದ್ದಿರುವುದು ಸದ್ಯ ದೇವಾಲಯದ ಆಡಳಿತ ಮಂಡಳಿಯನ್ನು ಭಾರೀ ಬೇಸರಕ್ಕೆ ದೂಡಿದೆ. ಇಲ್ಲಿಗೆ ಬರುವ ಭಕ್ತರು ತಮ್ಮಿಂದ ಕೈಲಾದಷ್ಟು ಬೆಲೆಬಾಳುವ ಚಿನ್ನ, ವಜ್ರ, ಬೆಳ್ಳಿಯ ಆಭರಣಗಳನ್ನು ದೇಣಿಗೆಯಾಗಿ ನೀಡುತ್ತಾರೆ. ದೇಗುಲದ ಮಂಡಳಿ ಕೂಡ ಅಮೂಲ್ಯವಾದ ಕಾಣಿಕೆಗಳನ್ನು ನೋಡುವುದು ತೀರ ಸಾಮಾನ್ಯ. ಆದರೆ, ಪ್ರಥಮ ಬಾರಿಗೆ ಭಕ್ತರು ನೀಡಿರುವ ಬಹುತೇಕ ಬೆಳ್ಳಿ ಆಭರಣಗಳು ನಕಲಿ ಆಗಿರುವುದು ಬೆಳಕಿಗೆ ಬಂದಿದೆ. ಭಕ್ತಾಧಿಗಳು ನೀಡಿರುವ ಬೆಳ್ಳಿ ವಸ್ತುಗಳಲ್ಲಿ ಬಹುತೇಕ ನಕಲಿ ಆಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವುದರ ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮಕಾರಿ ಆಗಿದೆ ಎಂಬ ಕಳವಳಕಾರಿ ಸಂಗತಿಯೂ ಬಯಲಾಗಿದೆ. ಈ ಪ್ರಕರಣ ಬೆನ್ನತ್ತಿರುವ ಅಧಿಕಾರಿಗಳಿಗೆ ತನಿಖೆಯಲ್ಲಿ ಸಾಕಷ್ಟು ಆಶ್ಚರ್ಯಕರ ವಿಷಯಗಳು ಗೊತ್ತಾಗಿದೆ.
ದೇವಾಲಯಕ್ಕೆ ನೀಡಲಾದ ಬೆಳ್ಳಿಯ ಬಹುಪಾಲು ಭಾಗವು ವಾಸ್ತವವಾಗಿ ಬೆಳ್ಳಿಯೇ ಅಲ್ಲ. ಬದಲಿಗೆ ಇದು ಕ್ಯಾಡ್ಮಿಯಮ್ ಸೇರಿದಂತೆ ಅಗ್ಗದ ಲೋಹಗಳೊಂದಿಗೆ ಮಿಶ್ರಣವಾಗಿವೆ. ಇದು ಅಪಾಯಕಾರಿಯಾದ ವಿಷಕಾರಿ ವಸ್ತು ಎನ್ನಲಾಗಿದ್ದು, ಇದನ್ನು ಮುಟ್ಟುವ ಜನರಿಗೆ ಆರೋಗ್ಯದ ಸಮಸ್ಯೆಗಳು ಕಾಡುವ ಬಗ್ಗೆಯೂ ವರದಿಯಾಗಿದೆ. ವೈಷ್ಣೋದೇವಿ ದೇವಸ್ಥಾನ ಮಂಡಳಿಯು ಸುಮಾರು 20 ಟನ್ ಸಂಗ್ರಹಿಸಿದ ಬೆಳ್ಳಿ ವಸ್ತುಗಳ ಕಾಣಿಕೆಯನ್ನು ಸರ್ಕಾರಿ ಟಂಕಸಾಲೆಗೆ ಕಳುಹಿಸಿದಾಗ ಇದೆಲ್ಲವೂ ಬೆಳಕಿಗೆ ಬಂದಿದೆ. ಸರ್ಕಾರದ ಇಲಾಖೆಗಳು ನಡೆಸಿರುವ ಪರೀಕ್ಷೆಗಳಲ್ಲಿ, ಲೋಹದ ಸುಮಾರು ಶೇ5ರಿಂದ 6ರಷ್ಟು ಮಾತ್ರ ವಾಸ್ತವವಾಗಿ ಬೆಳ್ಳಿ ಎಂದು ಸಾಬೀತಾಗಿದೆ. ಉಳಿದದ್ದೆಲ್ಲ ಕ್ಯಾಡ್ಮಿಯಮ್ ಮತ್ತು ಕಬ್ಬಿಣ ಮಿಶ್ರಿತ. ಭಕ್ತರಿಂದ ಬಂದ ವಸ್ತುಗಳು ಬಗ್ಗೆ ದೇಗುಲದ ಆಡಳಿತ ಮಂಡಳಿ ತೀರ ಆತಂಕ ವ್ಯಕ್ತಪಡಿಸಿದೆ.
ಮತ್ತೊಂದೆಡೆ, ಬೆಳ್ಳಿ ಈಗ ಬಲು ದುಬಾರಿಯಾಗಿದೆ. ಈ ನಿಟ್ಟನಲ್ಲಿ, ಕೆಲ ಭಕ್ತಾಧಿಗಳು, ಅಗ್ಗ ಬೆಲೆಯ ಕ್ಯಾಡ್ಮಿಯಂ ಬಳಕೆಯಿಂದ ಮಾಡಲ್ಪಟ್ಟ ಬೆಳ್ಳಿಯನ್ನು ಕಾಣಿಕೆಯ ರೂಪದಲ್ಲಿ ಕೊಡುತ್ತಿರಬಹುದಾ? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಆದ್ದರಿಂದ, ಈ ಕಾಣಿಕೆಗಳ ಒಟ್ಟಾರೆ ಮೌಲ್ಯ ತೀವ್ರವಾಗಿ ಕುಸಿದಿದೆ ಎಂದು ವರದಿಯಾಗಿದೆ. ಇದಕ್ಕೆ ಅದ್ಭುತ ಉದಾಹರಣೆ ಎಂದರೆ, ಸುಮಾರು 70 ಕೆಜಿ ಬೆಳ್ಳಿ ವಸ್ತುಗಳ ದೇಣಿಗೆಯಲ್ಲಿ ಕೇವಲ 3 ಕೆಜಿ ಮಾತ್ರ ಅಸಲಿ ಬೆಳ್ಳಿ ಲಭಿಸಿದೆ ಎಂಬುದು ನಿಜಕ್ಕೂ ಬೆಚ್ಚಿಬೀಳುವ ಸಂಗತಿಯೇ.