ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ, ವಿಶೇಷವಾಗಿ ಸರಕು ಸಾಗಣೆ ವಾಹನಗಳ ಮಾಲೀಕರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಮುಖ ಸೂಚನೆಯೊಂದನ್ನು ನೀಡಿದೆ. ರಸ್ತೆ ಸುರಕ್ಷತೆ ಮತ್ತು ಮೂಲಸೌಕರ್ಯದ ಹಿತದೃಷ್ಟಿಯಿಂದ ಓವರ್‌ಲೋಡ್ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವಾಲಯ ಮುಂದಾಗಿದ್ದು, ಏಪ್ರಿಲ್ 15ರಿಂದಲೇ ಅನ್ವಯವಾಗುವಂತೆ ಹೊಸ ದಂಡದ ನಿಯಮಗಳನ್ನು ಜಾರಿಗೆ ತಂದಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿ ಹೆಚ್ಚು ತೂಕ ಹೊತ್ತು ಸಾಗುವ ವಾಹನಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ಸಚಿವಾಲಯ ಮಂಗಳವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ನಿಯಮದ ಪ್ರಕಾರ, ವಾಹನವು ಹೊತ್ತಿರುವ ಹೆಚ್ಚುವರಿ ತೂಕದ ಶೇಕಡಾವಾರು ಆಧಾರದ ಮೇಲೆ ದಂಡದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಶೇಕಡಾ 10 ರವರೆಗೆ ಹೆಚ್ಚುವರಿ ಲೋಡ್ ಹೊಂದಿರುವ ವಾಹನಗಳಿಗೆ ಯಾವುದೇ ಓವರ್‌ಲೋಡ್ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ, ಶೇಕಡಾ 10 ರಿಂದ ಶೇಕಡಾ 40 ರಷ್ಟು ತೂಕ ಹೊತ್ತ ವಾಹನಗಳಿಗೆ ಮೂಲ ದರಕ್ಕಿಂತ ಎರಡು ಪಟ್ಟು ಹಾಗೂ ಶೇಕಡಾ 40 ಕ್ಕಿಂತ ಹೆಚ್ಚಿನ ಲೋಡ್ ಹೊತ್ತ ವಾಹನಗಳಿಗೆ ಮೂಲ ದರಕ್ಕಿಂತ ನಾಲ್ಕು ಪಟ್ಟು ಶುಲ್ಕ ವಿಧಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಟೋಲ್ ಪ್ಲಾಜಾಗಳಲ್ಲಿ ಸ್ಥಾಪಿಸಲಾದ ಪ್ರಮಾಣೀಕೃತ ತೂಕ ಮಾಪನ ಸಾಧನಗಳನ್ನು ಬಳಸಿಕೊಂಡು ಈ ಓವರ್‌ಲೋಡ್ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಟೋಲ್ ಪ್ಲಾಜಾಗಳಲ್ಲಿ ತೂಕ ಮಾಪನ ಸೌಲಭ್ಯ ಲಭ್ಯವಿಲ್ಲದೇ ಹೋದರೆ ಅಂತಹ ಕಡೆಗಳಲ್ಲಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ವಿಶೇಷವೆಂದರೆ, ಈ ಶುಲ್ಕವನ್ನು ಕೇವಲ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಸಂಗ್ರಹಿಸಲಾಗುತ್ತದೆ ಮತ್ತು ನಿಯಮ ಉಲ್ಲಂಘಿಸಿದ ವಾಹನಗಳ ವಿವರಗಳನ್ನು ರಾಷ್ಟ್ರೀಯ ವಾಹನ ನೋಂದಣಿ (ವಾಹನ್) ಪೋರ್ಟಲ್‌ಗೆ ವರದಿ ಮಾಡಲಾಗುತ್ತದೆ. ದೃಢೀಕೃತ ಫಾಸ್ಟ್‌ಟ್ಯಾಗ್ ಇಲ್ಲದೆ ರಾಷ್ಟ್ರೀಯ ಹೆದ್ದಾರಿಗಳನ್ನು ಪ್ರವೇಶಿಸುವ ವಾಹನಗಳಿಗೆ ಅಸ್ತಿತ್ವದಲ್ಲಿರುವ ಕಠಿಣ ನಿಯಮಗಳೇ ಅನ್ವಯವಾಗಲಿವೆ. ರಿಯಾಯಿತಿದಾರರು ಪರಿಷ್ಕೃತ ನಿಯಮಗಳನ್ನು ಅಳವಡಿಸಿಕೊಳ್ಳಲು ಒಪ್ಪದ ಹೊರತು, ಹಳೆಯ ಕೆಲವು ಖಾಸಗಿ ಹೂಡಿಕೆ ಯೋಜನೆಗಳಿಗೆ ಈ ನಿಬಂಧನೆಗಳು ಅನ್ವಯಿಸುವುದಿಲ್ಲ. ಹೊಸದಾಗಿ ರೂಪಿಸಲಾದ ಈ ನಿಯಮಗಳು ಓವರ್‌ಲೋಡ್ ಮಾಡಿದ ವಾಹನಗಳಿಂದ ಉಂಟಾಗುವ ರಸ್ತೆ ಹಾನಿಯನ್ನು ಕಡಿಮೆ ಮಾಡುವುದಲ್ಲದೆ, ರಾಷ್ಟ್ರೀಯ ಹೆದ್ದಾರಿಗಳಾದ್ಯಂತ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಸರಕುಗಳ ಚಲನೆಯನ್ನು ಉತ್ತೇಜಿಸಲಿದೆ ಎಂದು ಸರ್ಕಾರ ಆಶಿಸಿದೆ.