ಚೆನ್ನೈ : ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ನೇತೃತ್ವದ ತಮಿಳುಗ ವೆಟ್ರಿ ಕಳಗಂ (TVK) ಚುನಾವಣಾ ಕಣಕ್ಕೆ ಇಳಿಯುವ ಮೊದಲೇ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದು, ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಸೇಲಂ ಜಿಲ್ಲೆಯ ಹೈ-ಪ್ರೊಫೈಲ್ ಕ್ಷೇತ್ರವಾದ ಎಡಪ್ಪಾಡಿಯಲ್ಲಿ ಟಿವಿಕೆ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾ ಆಯೋಗವು ತಿರಸ್ಕರಿಸಿದೆ. ಆಯೋಗದ ನಿಯಮಗಳ ಪ್ರಕಾರ, ಪ್ರತಿಯೊಂದು ನಾಮಪತ್ರಕ್ಕೆ ಕನಿಷ್ಠ 10 ಸೂಚಕರ (Proposers) ಬೆಂಬಲದ ಸಹಿ ಇರಬೇಕು. ಆದರೆ, ಟಿವಿಕೆ ಅಭ್ಯರ್ಥಿ ಅರುಣ್‌ಕುಮಾರ್ ಎಂ. ಸಲ್ಲಿಸಿದ ಪತ್ರಗಳಲ್ಲಿ ಕೇವಲ ಎಂಟು ಸಹಿಗಳಿದ್ದವು. ಇತ್ತ ಪರ್ಯಾಯ ಅಭ್ಯರ್ಥಿ ನಿತ್ಯಾರ ಪತ್ರದಲ್ಲಿ ಏಳು ಸಹಿಗಳಿದ್ದವು ಎನ್ನುವ ಕಾರಣಕ್ಕೆ ಇವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಇದರಿಂದಾಗಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಭದ್ರಕೋಟೆಯಲ್ಲಿ ವಿಜಯ್ ಪಕ್ಷಕ್ಕೆ ಅಭ್ಯರ್ಥಿಯೇ ಇಲ್ಲದಂತಾಗಿದೆ.
ಈ ರಾಜಕೀಯ ಬೆಳವಣಿಗೆಯ ನಡುವೆ ಪ್ರಕರಣವು ಮತ್ತೊಂದು ಗಂಭೀರ ತಿರುವು ಪಡೆದುಕೊಂಡಿದ್ದು, ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೇ ಟಿವಿಕೆ ಅಭ್ಯರ್ಥಿ ಅರುಣ್‌ಕುಮಾರ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು, ನಾಮಪತ್ರಗಳ ಪರಿಶೀಲನೆಯ ಸಮಯದಲ್ಲೂ ಅವರು ಗೈರುಹಾಜರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಅಭ್ಯರ್ಥಿಯನ್ನು ಅಪಹರಿಸಿರಬಹುದು ಎಂದು ವಿಜಯ್ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಗಂಭೀರ ಆರೋಪ ಮಾಡುತ್ತಿದ್ದು, ಈ ಬೆಳವಣಿಗೆಯ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಪಕ್ಷದ ಒಳಗೆ ಬೇರೆಯದ್ದೇ ರೀತಿಯ ಬಿಕ್ಕಟ್ಟಿನ ವಾತಾವರಣ ನಿರ್ಮಿಸಿದೆ. ಚುನಾವಣಾ ಆಯೋಗವು ಅಭ್ಯರ್ಥಿ ನಾಪತ್ತೆಯಾದ ವಿಷಯದ ಕುರಿತು ಈವರೆಗೆ ಯಾವುದೇ ಔಪಚಾರಿಕ ಹೇಳಿಕೆ ನೀಡಿಲ್ಲ.
ಇತ್ತ ವಿಪಕ್ಷ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ತಮ್ಮ ಸ್ವಕ್ಷೇತ್ರದಿಂದ ಆರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಆಡಳಿತಾರೂಢ ಡಿಎಂಕೆ ಪರವಾಗಿ ಸಿ. ಕಾಸಿ ಕಣದಲ್ಲಿದ್ದಾರೆ. ಈ ಎರಡೂ ನಾಮಪತ್ರಗಳು ಕ್ರಮಬದ್ಧವಾಗಿದ್ದು ಅಂಗೀಕರಿಸಲ್ಪಟ್ಟಿದ್ದು, ದಳಪತಿ ವಿಜಯ್ ತಮ್ಮ ಚೊಚ್ಚಲ ಚುನಾವಣಾ ಹೋರಾಟದಲ್ಲೇ ಪ್ರಬಲ ಎದುರಾಳಿ ಪಳನಿಸ್ವಾಮಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೆಡ್ಡು ಹೊಡೆಯಲು ಯೋಜಿಸಿದ್ದರು. ಆದರೆ ತಾಂತ್ರಿಕ ಕಾರಣ ಮತ್ತು ಅಭ್ಯರ್ಥಿಯ ನಾಪತ್ತೆಯಿಂದಾಗಿ ಟಿವಿಕೆಗೆ ಈ ಕ್ಷೇತ್ರದಲ್ಲಿ ಮುಖಭಂಗ ಉಂಟಾಗಿದೆ.