ನವದೆಹಲಿ : ಜೆಡಿ(ಯು) ಹಿರಿಯ ನಾಯಕ ಕೆ.ಸಿ. ತ್ಯಾಗಿ ಪಕ್ಷವನ್ನು ತೊರೆದಿದ್ದಾರೆ ಮತ್ತು ತಮ್ಮ ಮುಂದಿನ ನಡೆ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುವುದಾಗಿ ಹೇಳಿದ್ದಾರೆ. ಜೆಡಿ(ಯು) ಪ್ರಧಾನ ಕಾರ್ಯದರ್ಶಿ, ಮುಖ್ಯ ವಕ್ತಾರ ಮತ್ತು ರಾಜಕೀಯ ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಕೆಸಿ ತ್ಯಾಗಿ ಅವರು ಈಗ ಜೆಡಿ(ಯು)ಗೆ ಗುಡ್ ಬೈ ಹೇಳಿದ್ದಾರೆ. "ಹೌದು, ನಾನು ಪಕ್ಷವನ್ನು ತೊರೆದಿದ್ದೇನೆ" ಎಂದು ತ್ಯಾಗಿ ಮಾಧ್ಯಮ ಒಂದಕ್ಕೆ ತಿಳಿಸಿದ್ದಾರೆ. ಸಮಾಜದ ವಂಚಿತ ವರ್ಗಗಳು ಸೇರಿದಂತೆ ದೀನದಲಿತರು, ರೈತರು ಮತ್ತು ಕೃಷಿಕರ ಹಿತಾಸಕ್ತಿಗಳಿಗೆ ಸಂಬಂಧಿಸಿದ "ದೊಡ್ಡ ಮತ್ತು ವಿಶಾಲವಾದ ಸೈದ್ಧಾಂತಿಕ ಅಂಶಗಳಿಗೆ" ತಮ್ಮ ಬದ್ಧತೆ " ಅಷ್ಟೇ ದೃಢವಾಗಿದೆ" ಎಂದು ಅವರು ಪ್ರತಿಪಾದಿಸಿದ್ದಾರೆ. "ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನನ್ನ ಒಡನಾಡಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ನನಗೆ ವೈಯಕ್ತಿಕ ಗೌರವ ಇದೆ. ಅದು ಬದಲಾಗಿಲ್ಲ" ಎಂದು ತ್ಯಾಗಿ ಹೇಳಿದ್ದಾರೆ.