ನವದೆಹಲಿ : ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಮುಂದುವರಿದಿದ್ದು, ಭಾರತದ ಪ್ರಮುಖ ನಗರಗಳಲ್ಲಿ ಎಲ್ ಪಿಜಿ ಸಿಲಿಂಡರ್ ಅಭಾವ ತಲೆದೋರಿದೆ. ಏತನ್ಮಧ್ಯೆ ಗುಜರಾತ್ ನ ಜಾಮ್ ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ತೈಲ ಸಂಸ್ಕರಣಾ ಘಟಕದಲ್ಲಿನ ಎಲ್ ಪಿಜಿ ಉತ್ಪಾದನೆಯಲ್ಲಿ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಜಾಗತಿಕ ಇಂಧನ ಮಾರುಕಟ್ಟೆಗಳು ಅಸ್ಥಿರತೆಯಲ್ಲಿರುವ ಸಂದರ್ಭದಲ್ಲಿ ಭಾರತೀಯ ಮನೆಗಳಿಗೆ ನಿರಂತರ ಎಲ್ ಪಿಜಿ ಸಿಲಿಂಡರ್ ಪೂರೈಕೆ ಮಾಡಲು ಆದ್ಯತೆ ನೀಡುವ ಗುರಿಯನ್ನು ಹೊಂದಿರುವುದಾಗಿ ರಿಲಯನ್ಸ್ ತಿಳಿಸಿದೆ. ಆರ್ ಐಎಲ್ ನೀಡಿರುವ ಪ್ರಕಟನೆಯಲ್ಲಿ, ಎಲ್ ಪಿಜಿ ಸಿಲಿಂಡರ್ ಉತ್ಪಾದನೆ ಹೆಚ್ಚಳಕ್ಕಾಗಿ ರಿಲಯನ್ಸ್ ಸಿಬಂದಿಗಳು ಸಂಸ್ಕರಣಾ ಘಟಕದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ದೇಶೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಿಲಯನ್ಸ್ ಕಂಪನಿಯು ಭಾರತದ ಸರ್ಕಾರದ ಜತೆ ನಿಕಟ ಸಂಪರ್ಕದಲ್ಲಿ ಇದ್ದಿರುವುದಾಗಿ ತಿಳಿಸಿದ್ದು, ರಾಷ್ಟ್ರದ ನಿಯಮಾನುಸಾರ ಪ್ರಮುಖ ಕ್ಷೇತ್ರಗಳು ಹಾಗೂ ಜನರಿಗೆ ಎಲ್ ಪಿಜಿ ಸಮಸ್ಯೆ ತಲೆದೋರದಂತೆ ಸರಬರಾಜು ಮಾಡುವುದಾಗಿ ಭರವಸೆ ನೀಡಿರುವುದಾಗಿ ವರದಿಯಾಗಿದೆ. ಶೇ.85ರಿಂದ 90ಶೇಕಡದಷ್ಟು ಎಲ್ ಪಿಜಿ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೀಗ ಇರಾನ್, ಇಸ್ರೇಲ್, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದ ಪರಿಣಾಮ 2026ರ ಮಾರ್ಚ್ ಮೊದಲ ವಾರದಿಂದ ವಾಣಿಜ್ಯ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದ್ದು, ಇದರಿಂದಾಗಿ ಹೋಟೆಲ್ ಉದ್ಯಮಗಳು ಹಾಗೂ ಗೃಹಬಳಕೆದಾರರು ಸಮಸ್ಯೆ ಎದುರಿಸುವಂತಾಗಿದೆ.