ನವದೆಹಲಿ : ನ್ಯಾಯಾಲಯದಿಂದ ಖುಲಾಸೆಗೊಂಡ ಬಳಿಕ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು ಭಾವುಕರಾಗಿ ಕಣ್ಣೀರು ಹಾಕುತ್ತ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. "ಕೇಜ್ರಿವಾಲ್ ಭ್ರಷ್ಟನಲ್ಲ. ನಾನು ರಾಜಕೀಯದಲ್ಲಿ ಸಂಪಾದಿಸಿರುವುದು ಹಣವಲ್ಲ, ಪ್ರಾಮಾಣಿಕತೆ ಮಾತ್ರ. ಇಂದು ನ್ಯಾಯಾಲಯವೇ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಪ್ರಾಮಾಣಿಕರು ಎಂದು ಸ್ಪಷ್ಟಪಡಿಸಿದೆ," ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಎದುರಿಸಿದ ಆರೋಪಗಳು, ಬಂಧನಗಳು ಮತ್ತು ಸಾರ್ವಜನಿಕ ಟೀಕೆಗಳ ನಡುವೆ ತಾವು ಸತ್ಯದ ಮಾರ್ಗದಲ್ಲೇ ನಡೆದಿದ್ದೇವೆ ಎಂಬ ವಿಶ್ವಾಸವನ್ನು ಕೇಜ್ರಿವಾಲ್ ವ್ಯಕ್ತಪಡಿಸಿದರು. ನ್ಯಾಯಾಲಯದ ತೀರ್ಪು ಸತ್ಯಕ್ಕೆ ಸಿಕ್ಕ ಜಯವಾಗಿದ್ದು, ತಮ್ಮ ಮೇಲೆ ನಂಬಿಕೆ ಇಟ್ಟ ಜನರಿಗೆ ಇದು ಸಮಾಧಾನಕರ ಕ್ಷಣ ಎಂದು ಹೇಳಿದರು. ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರ ಆದೇಶದಂತೆ, ಇಬ್ಬರ ಜೊತೆಗೆ ಇನ್ನೂ 21 ಮಂದಿಗೆ ಪ್ರಕರಣದಿಂದ ಬಿಡುಗಡೆ ದೊರೆತಿದೆ. ಆರೋಪಪಟ್ಟಿಯಲ್ಲಿ ದೃಢವಾದ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.