ನವದೆಹಲಿ : ಸಹಾರನ್‌ಪುರದಲ್ಲಿ "ದೇವರಾಜ್ ಸೆಹಗಲ್" ಎಂಬ ಹಿಂದೂ ಹೆಸರಿನಲ್ಲಿ ಅಡಗಿಕೊಂಡು ಭಾರತದ ವಿರುದ್ಧ ಗೂಢಚರ್ಯೆ ನಡೆಸುತ್ತಿದ್ದ ಪಾಕಿಸ್ತಾನಿ ಪ್ರಜೆ ಇಕ್ಬಾಲ್ ಭಟ್ಟಿ, 17 ವರ್ಷಗಳ ಜೈಲು ಶಿಕ್ಷೆಯ ನಂತರ ಕೊನೆಗೂ ಪಾಕಿಸ್ತಾನಕ್ಕೆ ಗಡೀಪಾರು ಮಾಡಲ್ಪಟ್ಟಿದ್ದಾನೆ. ಭಾರತದ ಸೇನಾ ನೆಲೆಗಳ ಮೇಲೆ ಕಣ್ಣಿಟ್ಟು, ನಕಲಿ ದಾಖಲೆಗಳ ಮೂಲಕ ದೇಶದ ಒಳಗೆ ನುಸುಳಿದ್ದ ಪಾಕಿಸ್ತಾನಿ ಗುಪ್ತಚರ ಇಕ್ಬಾಲ್ ಭಟ್ಟಿಯ ಕಥೆ ಅಂತಿಮವಾಗಿ ಮುಕ್ತಾಯಗೊಂಡಿದೆ. ಸುಮಾರು 17 ವರ್ಷಗಳ ಕಾಲ ಭಾರತದ ಜೈಲಿನಲ್ಲಿದ್ದ ಈತನನ್ನು ಮಂಗಳವಾರ ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಿ ರೇಂಜರ್ಸ್‌ಗಳಿಗೆ ಹಸ್ತಾಂತರಿಸಲಾಯಿತು. 2008ರಲ್ಲಿ ಈತ ಉತ್ತರ ಪ್ರದೇಶದ ಸಹಾರನ್‌ಪುರದ ಹಕೀಕತ್ ನಗರದಲ್ಲಿ "ದೇವರಾಜ್ ಸೆಹಗಲ್" ಎಂಬ ಹೆಸರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಈತ ಕೇವಲ ಹೆಸರನ್ನಷ್ಟೇ ಬದಲಿಸಿರಲಿಲ್ಲ, ಬದಲಿಗೆ ಭಾರತದ ವೋಟರ್ ಐಡಿ, ಪಾನ್ ಕಾರ್ಡ್ ಮತ್ತು ರೇಷನ್ ಕಾರ್ಡ್‌ಗಳನ್ನು ಕೂಡ ಅಕ್ರಮವಾಗಿ ಪಡೆದಿದ್ದನು. ಈ ನಕಲಿ ದಾಖಲೆಗಳನ್ನು ಬಳಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಖಾತೆಯನ್ನು ಕೂಡ ತೆರೆದಿದ್ದನು. ಆದರೆ ದಾಖಲೆಗಳ ಪರಿಶೀಲನೆ ವೇಳೆ ಬ್ಯಾಂಕ್ ವ್ಯವಸ್ಥಾಪಕರಿಗೆ ಅನುಮಾನ ಬಂದಿದ್ದೇ ಈತನ ಪತನಕ್ಕೆ ನಾಂದಿಯಾಯಿತು.
ಆಗಸ್ಟ್ 8, 2008 ರಂದು ಪಂಜಾಬ್‌ನ ಪಟಿಯಾಲದಲ್ಲಿ ಪೊಲೀಸರು ಈತನನ್ನು ಬಂಧಿಸಿದಾಗ ಅಸಲಿ ಸತ್ಯ ಹೊರಬಂತು. ಈತನ ಬಳಿ ಭಾರತೀಯ ಸೇನೆಗೆ ಸಂಬಂಧಿಸಿದ ಅತ್ಯಂತ ರಹಸ್ಯವಾದ ಮತ್ತು ಸೂಕ್ಷ್ಮವಾದ ನಕ್ಷೆಗಳು ಪತ್ತೆಯಾದವು.ಈತನ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ (Official Secrets Act) ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣಗಳು ದಾಖಲಾದವು.ಸೇನಾ ನೆಲೆಗಳ ಬಳಿ ಇದ್ದ ಸಹಾರನ್‌ಪುರ ಜೈಲಿನಲ್ಲಿ ಈತನನ್ನು ಇರಿಸುವುದು ಸುರಕ್ಷಿತವಲ್ಲ ಎಂದು ಭಾವಿಸಿದ ಅಧಿಕಾರಿಗಳು, ಈತನನ್ನು ಗೌತಮ್ ಬುದ್ಧ ನಗರದ ಜಿಲ್ಲಾ ಜೈಲಿಗೆ ಸ್ಥಳಾಂತರಿಸಿದ್ದರು. 2025ರ ಮಾರ್ಚ್ 22 ರಂದು ಇಕ್ಬಾಲ್ ಭಟ್ಟಿ ತನ್ನ 17 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದನು. ಆದರೆ ಪಾಕಿಸ್ತಾನದ ಪ್ರಜೆಯಾಗಿದ್ದರಿಂದ ಮತ್ತು ಆತನ ಬಳಿ ಯಾವುದೇ ಮಾನ್ಯ ಪ್ರಯಾಣ ದಾಖಲೆಗಳಿಲ್ಲದ ಕಾರಣ, ಸುಮಾರು 11 ತಿಂಗಳುಗಳ ಕಾಲ ಸಹಾರನ್‌ಪುರದ ಡಿಟೆನ್ಶನ್ ಸೆಂಟರ್‌ನಲ್ಲಿ ಇರಿಸಲಾಗಿತ್ತು.ಕೇಂದ್ರ ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಸ್ಥಾಪನಾ ಸಚಿವಾಲಯದ ಅನುಮತಿ ಪಡೆದ ನಂತರ, ಪಾಕಿಸ್ತಾನಿ ಹೈಕಮಿಷನ್ ಜೊತೆ ಸಮನ್ವಯ ಸಾಧಿಸಿ ಗಡೀಪಾರು ದಿನಾಂಕವನ್ನು ನಿಗದಿಪಡಿಸಲಾಯಿತು. ಭಾರೀ ಭದ್ರತೆಯ ನಡುವೆ ಈತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ತಾನು ನಿರಪರಾಧಿ ಎಂದು ಭಟ್ಟಿ ಬೊಬ್ಬೆ ಹೊಡೆದಿದ್ದರೂ, ಸಾಕ್ಷ್ಯಾಧಾರಗಳು ಆತನ ಅಪರಾಧವನ್ನು ಸಾಬೀತುಪಡಿಸಿದ್ದವು. ಮಂಗಳವಾರ ಮಧ್ಯಾಹ್ನ ಅಟ್ಟಾರಿ-ವಾಗ್ಹಾ ಗಡಿಯಲ್ಲಿ ಅಧಿಕೃತ ಪ್ರಕ್ರಿಯೆಗಳನ್ನು ಪೂರೈಸಿ ಆತನನ್ನು ಪಾಕ್ ರೇಂಜರ್ಸ್‌ಗೆ ಒಪ್ಪಿಸಲಾಯಿತು ಎಂದು ಸರಕಾರಿ ಮೂಲಗಳಿಂದ ತಿಳಿದುಬಂದಿದೆ.