ಗುವಾಹಟಿ : ಕೆಲವೇ ತಿಂಗಳಲ್ಲಿ ನಡೆಯಲಿರುವ ಅಸ್ಸಾಂ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಆಘಾತವಾಗುವ ಬೆಳವಣಿಗೆ ನಡೆದಿದ್ದು, ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಭೂಪೇನ್ ಬೋರಾ ದಿಢೀರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹೈಕಮಾಂಡ್ಗೆ ರಾಜೀನಾಮೆ ಪತ್ರ ಕಳುಹಿಸಿರುವ ಬೋರಾ, ರಾಜ್ಯ ಕಾಂಗ್ರೆಸ್ ನಾಯಕರೊಂದಿಗಿನ ಭಿನ್ನಾಭಿಪ್ರಾಯದ ನಂತರ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಎರಡೂ ದಿನಗಳಿಂದ ಅವರನ್ನು ಸಮಾಧಾನ ಪಡಿಸಲು ರಾಜ್ಯ ಕಾಂಗ್ರೆಸ್ ನಾಯಕರು ಶ್ರಮವಹಿಸಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿಯೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಸೇರಿ ಹಲವು ಕಾಂಗ್ರೆಸ್ ನಾಯಕರು ಅವರ ಮನೆಗೆ ಭೇಟಿ ನೀಡಿ ಮನವೊಲಿಸಲು ಮುಂದಾಗಿದ್ದರು. ಆದರೆ ಇಂದು ಬೋರಾ ಅಧಿಕೃತವಾಗಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಭೂಪೇನ್ ಬೋರಾ, ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ರಾಜೀನಾಮೆ ಪತ್ರವನ್ನು ಹೈಕಮಾಂಡ್ಗೆ ಕಳುಹಿಸಿದ್ದೇನೆ. ಇದರ ಬಗ್ಗೆ ನಾನು ಹೆಚ್ಚು ಹೇಳಲು ಬಯಸುವುದಿಲ್ಲ. ಆದರೆ ಇದು ಸ್ವಾಭಿಮಾನದ ವಿಷಯ. ಅಸ್ಸಾಂನಲ್ಲಿ ಪಕ್ಷವನ್ನು ಹೇಗೆ ಮುನ್ನಡೆಸಲಾಗುತ್ತಿದೆ ಎಂಬುದರ ಕುರಿತು ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಸಣ್ಣ ವಿಷಯಗಳಲ್ಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ರಾಜ್ಯ ನಾಯಕತ್ವ ವಿಫಲವಾಗಿದೆ. ಪಕ್ಷವನ್ನು ಈ ರೀತಿ ಮುನ್ನಡೆಸಿದರೆ, ಅದರ ಭವಿಷ್ಯ ಅನಿಶ್ಚಿತವಾಗಿರುತ್ತದೆ. ನಮ್ಮ ಮೈತ್ರಿಕೂಟದ ಪಾಲುದಾರರು ಸೇರಿದಂತೆ ಎಲ್ಲರಿಗೂ ಪಕ್ಷದಲ್ಲಿ ಏನು ನಡೆಯುತ್ತಿದೆ ಮತ್ತು ಅದನ್ನು ಹೇಗೆ ಮುನ್ನಡೆಸಲಾಗುತ್ತಿದೆ ಎಂದು ತಿಳಿದಿದೆ ಎಂದಿದ್ದಾರೆ.
ಆಡಳಿತರೂಢ ಬಿಜೆಪಿ ಸೇರುತ್ತಿರಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿರುವ ಅವರು, ನಾನು ರಾಜಕೀಯವನ್ನು ಬಿಡುವುದಿಲ್ಲ. ನಾನು ನಿಮಗೆ ಸತ್ಯವನ್ನು ತಿಳಿಸುತ್ತೇನೆ ಎಂದಷ್ಟೇ ಹೇಳಿ ಸ್ಪಷ್ಟವಾಗಿ ಉತ್ತರ ನೀಡಲಿಲ್ಲ. ಇನ್ನೂ ಬೋರಾ ಅವರ ಹಠಾತ್ ರಾಜೀನಾಮೆಯಿಂದ ಕಾಂಗ್ರೆಸ್ ಸಂಕಷ್ಟ ಎದುರಿಸುತ್ತಿದ್ದು, ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುತ್ತಿದೆ. ಕಳೆದವಾರ ಹೈಕಮಾಂಡ್ ಗೊಗೊಯ್ ಅವರನ್ನು ಮೈತ್ರಿ ಸಮನ್ವಯ ಕರ್ತವ್ಯಗಳಿಂದ ಬಿಡುಗಡೆ ಮಾಡಿ ಬೋರಾ ಅವರಿಗೆ ಜವಾಬ್ದಾರಿಯನ್ನು ವಹಿಸಿದೆ ಎನ್ನಲಾಗಿದೆ. ಮಾಜಿ ಶಾಸಕರಾಗಿದ್ದ ಬೋರಾ ಅವರು ಈ ಹಿಂದೆ ಅಸ್ಸಾಂ ಕಾಂಗ್ರೆಸ್ ವಕ್ತಾರರಾಗಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2021 ರಲ್ಲಿ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥರ ಜವಾಬ್ದಾರಿಯನ್ನು ನಿರ್ವಹಿಸಿದ್ದರು