ನವದೆಹಲಿ: 'ಅಮೆರಿಕದಿಂದ ತೈಲ ಖರೀದಿಗೆ ಭಾರತ ಒಪ್ಪಿಕೊಂಡಿರುವುದು ಒತ್ತಡಕ್ಕೆ ಮಣಿದು ಅಲ್ಲ, ಬದಲಿಗೆ ಭಾರತದ ಹಿತಾಸಕ್ತಿಯ ದೃಷ್ಟಿಯಿಂದ' ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ವ್ಯಾಪಾರ ಒಪ್ಪಂದದ ಕುರಿತಾಗಿ ಜಂಟಿ ಹೇಳಿಕೆ ಬಿಡುಗಡೆಯಾದ ಬೆನ್ನಲ್ಲೇ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಅವರು, ಟ್ರಂಪ್ ವಿಧಿಸಿದ್ದ ಷರತ್ತಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡಬಾರದು ಎಂದು ಟ್ರಂಪ್ ಹೇಳಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಭಾರತವು ಯಾವ ದೇಶದಿಂದ ತೈಲವನ್ನು ಖರೀದಿ ಮಾಡಬೇಕು ಎಂಬುದನ್ನು ಈ ಒಪ್ಪಂದ ನಿರ್ಧಾರ ಮಾಡುವುದಿಲ್ಲ. ಬದಲಿಗೆ ಭಾರತದ ಹಿತದೃಷ್ಟಿಯಿಂದ ಅಮೆರಿಕದಿಂದ ತೈಲ ಖರೀದಿ ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ. ಭಾರತಕ್ಕೆ ತೈಲ ಸಮಸ್ಯೆ ಉಂಟಾಗದಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಅಮೆರಿಕದಿಂದ ಕಚ್ಚಾತೈಲ, ಎಲ್‌ಎನ್‌ಜಿ, ಎಲ್‌ಪಿಜಿ ಖರೀದಿ ಮಾಡುವುದು ಭಾರತಕ್ಕೆ ಅನುಕೂಲಕರವಾಗಿದೆ. ಹೀಗಾಗಿ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿ ಮಾಡಲಾಗುತ್ತಿದೆ. ಅಲ್ಲದೇ ನಮ್ಮ ಸರಕುಗಳ ಮೇಲೆ ಈಗ ಕೇವಲ ಶೇ.18 ಸುಂಕ ಇರುವುದರಿಂದ ಅಮೆರಿಕವೇ ನಮ್ಮ ಮೊದಲ ಆದ್ಯತೆ ಆಗಿರುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಮುಂದಿನ 5 ವರ್ಷಗಳಲ್ಲಿ ಅಮೆರಿಕದಿಂದ 45 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಖರೀದಿಸಲು ಭಾರತಕ್ಕೆ ಯಾವುದೇ ತೊಂದರೆಯಿಲ್ಲ. ಭಾರತದ ಆರ್ಥಿಕತೆಯು ಮುಂದಿನ ದಿನಗಳಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್ (181 ಲಕ್ಷ ಕೋಟಿ ರೂ.) ಬೇಡಿಕೆಯನ್ನು ಸೃಷ್ಟಿಸಲಿರುವ ಕಾರಣ ಭಾರತದ ಹಿತಾಸಕ್ತಿಗಳಿಗೆ ಯಾವುದೇ ಆತಂಕಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಭಾರತವು ಈಗಾಗಲೇ 27 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನುಆಮದು ಮಾಡಿಕೊಳ್ಳುತ್ತಿದೆ ಎಂದ ಗೋಯಲ್, ಮುಂದಿನ 5 ವರ್ಷದಲ್ಲಿ ಬೇಡಿಕೆ ಹೆಚ್ಚುತ್ತಲೇ ಸಾಗುವುದರಿಂದ ಅಮೆರಿಕದಿಂದ ಬೇಡಿಕೆ ಪೂರೈಸಿಕೊಳ್ಳಬಹುದಾಗಿದೆ ಎಂದರು. ಆಮದು ಹೆಚ್ಚಾದರೂ, ದೇಶೀಯ ಉದ್ಯಮದ ಹಿತಾಸಕ್ತಿಗಳನ್ನು ಕಾಪಾಡಲು ವ್ಯಾಪಾರ ಒಪ್ಪಂದದಲ್ಲಿ ಸಮರ್ಪಕ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ. 4-5 ಲಕ್ಷ ಕೋಟಿ ರೂ. ಮೌಲ್ಯದ ಕೃಷಿ ಮತ್ತು ಮತ್ಸ್ಯ ಉತ್ಪನ್ನಗಳನ್ನು ಭಾರತವು ರಫ್ತು ಮಾಡುತ್ತಿದ್ದು, ಹೊಸ ವ್ಯಾಪಾರ ನೀತಿಯಿಂದಾಗಿ ಇದರ ಪ್ರಮಾಣ ಹೆಚ್ಚಿ ಅಂತಿಮವಾಗಿ ನಮ್ಮ ರೈತರಿಗೆ ನೆರವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಒಪ್ಪಂದ ಕುರಿತಾದ ಭಾರತ-ಅಮೆರಿಕ ಜಂಟಿ ಹೇಳಿಕೆಯನ್ನು 2 ಪುಟಗಳ ದಾಖಲೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.