image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳ ಬಲ ಪಡೆದ ವಿಶ್ವದ ಮೊದಲ ಸಶಸ್ತ್ರ ಸೇನೆ ಭಾರತೀಯ ಸೇನೆ

ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳ ಬಲ ಪಡೆದ ವಿಶ್ವದ ಮೊದಲ ಸಶಸ್ತ್ರ ಸೇನೆ ಭಾರತೀಯ ಸೇನೆ

ನವದೆಹಲಿ : ಭಾರತೀಯ ಸೇನೆಯ 155 ಎಂಎಂ ಗನ್​ಗಳಿಗೆ ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳನ್ನು ನಿಯೋಜಿಸಿದೆ. ಈ ಬಲ ಪಡೆದ ವಿಶ್ವದ ಮೊದಲ ಸಶಸ್ತ್ರ ಸೇನೆ ಭಾರತದ್ದಾಗಿದೆ. ಡಿಆರ್​ಡಿಒ ಮತ್ತು ಐಐಟಿ ಮದ್ರಾಸ್ ಜಂಟಿಯಾಗಿ ಮತ್ತು ಸ್ವಂತವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಭೂಸೇನೆಯ ಬತ್ತಳಿಕೆಯಲ್ಲಿ ಇರುವ ಪ್ರಮುಖ ಶಸ್ತ್ರಾಸ್ತ್ರಗಳಲ್ಲಿ ಆರ್ಟಿಲರಿ ಶೆಲ್​ಗಳು ಇವೆ. ಈ ಶೆಲ್​ಗಳಿಗೆ ರಾಮ್​ಜೆಟ್ ಎಂಜಿನ್ ಅಳವಡಿಸಿರುವುದು ಗೇಮ್ ಚೇಂಜರ್ ಎನಿಸಿದೆ. ರಾಮ್​ಜೆಟ್ ಎಂಬುದು ಒಳನುಗ್ಗುವ ಗಾಳಿ ಬಳಸಿಕೊಂಡು ಕೆಲಸ ಮಾಡುವ ಎಂಜಿನ್ ಆಗಿದೆ. ತಿರುಗುವ ಕಂಪ್ರೆಸ್ಸರ್​ಗಳು ಮತ್ತು ಟರ್ಬೈನ್​ಗಳು ಬೇಕಾಗುವುದಿಲ್ಲ. ಗನ್​ನಿಂದ ಹೊರಹಾರುವ ಶೆಲ್ ಒಂದು ನಿರ್ದಿಷ್ಟ ವೇಗ ಪಡೆದಾಗ ರಾಮ್​ಜೆಟ್ ಎಂಜಿನ್ ಸಕ್ರಿಯಗೊಳ್ಳುತ್ತದೆ. ರಾಮ್​ಜೆಟ್ ಎಂಜಿನ್​ಗೆ ಗಾಳಿಯೇ ಪ್ರಮುಖ ಶಕ್ತಿ. ಈ ರಾಮ್​ಜೆಟ್​ಗಳನ್ನು ಸಾಮಾನ್ಯವಾಗಿ ಮಿಸೈಲ್​ಗಳಿಗೆ ಅಳವಡಿಸಲಾಗುತ್ತದೆ. ಆರ್ಟಿಲರಿ ಶೆಲ್​ಗಳಿಗೆ ಇತ್ತೀಚೆಗೆ ಇದರ ಅಳವಡಿಕೆ ಆರಂಭವಾಗಿದೆ.

ಇದು ಒಂದು ರೀತಿಯಲ್ಲಿ ಬುಲೆಟ್​ಗಳಂತೆ. ಆದರೆ, ಸ್ಫೋಟಕಗಳು ಆರ್ಟಿಲರಿ ಶೆಲ್​ನ ಒಳಗೆ ಇರುತ್ತವೆ. 155 ಎಂಎಂ ಗನ್, ಹೌವಿಟ್ಜರ್ ಗನ್ ಇತ್ಯಾದಿಗಳಿಂದ ಇವುಗಳನ್ನು ಶೂಟ್ ಮಾಡಲಾಗುತ್ತದೆ. ಸಾಮಾನ್ಯ ಆರ್ಟಿಲರಿ ಶೆಲ್​ಗಳು 5ರಿಂದ 10 ಕಿಮೀ ದೂರದವರೆಗೆ ಹೋಗಬಲ್ಲುವು. ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳು 50 ಕಿಮೀ ದೂರದವರೆಗೂ ಗುರಿಯನ್ನು ಹೊಡೆದುರುಳಿಸಬಲ್ಲುವು. ಭಾರತದಲ್ಲಿ ನಿಯೋಜಿಸಲಾಗಿರುವ ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳು ಸಾಮಾನ್ಯದವಕ್ಕಿಂತ ಶೇ. 30ರಷ್ಟು ಹೆಚ್ಚು ದೂರ ತಲುಪಬಲ್ಲುವು ಎಂದೆನ್ನಲಾಗುತ್ತಿದೆ. ಸದ್ಯ ಇದನ್ನು 155 ಎಂಎಂ ಗನ್​ಗಳಿಗೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಲೈಟ್ ಹೌವಿಟ್ಜರ್ ಗನ್ ಇತ್ಯಾದಿ ಇನ್ನೂ ಹಲವು ವೆಪನ್ ಸಿಸ್ಟಂಗಳಿಗೆ ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್​ಗಳನ್ನು ಸೇರಿಸುವ ಯೋಜನೆ ಭಾರತದ್ದಾಗಿದೆ. ಕ್ಷಿಪಣಿಗಳಿಗೆ ರಾಮ್​ಜೆಟ್ ಎಂಜಿನ್ ಬಳಸಲಾಗುತ್ತದೆ. ಆದರೆ, ಆರ್ಟಿಲರಿ ಶೆಲ್​ಗಳಿಗೆ ಇದನ್ನು ಅಳವಡಿಸುವ ಪ್ರಯತ್ನ ಇತ್ತೀಚಿನ ವರ್ಷಗಳಿಂದ ಆಗುತ್ತಿದೆ. ಅಮೆರಿಕದ ಬೋಯಿಂಗ್ ಮತ್ತು ನಾರ್ವೆಯ ನ್ಯಾಮ್ಮೋ ಕಂಪನಿಗಳು ಇಂಥ ಶೆಲ್​ಗಗಳನ್ನು ಅಭಿವೃದ್ಧಿಪಡಿಸಿವೆ. ಆದರೆ, ಇನ್ನೂ ಕೂಡ ಯಾವುದೇ ಸಶಸ್ತ್ರ ಸೇನಾ ಪಡೆಗಳ ಬಳಕೆಗೆ ಅದನ್ನು ನಿಯೋಜಿಸಲಾಗಿಲ್ಲ. ಆ ಮಟ್ಟಿಗೆ, ಇದನ್ನು ಬಳಸಿದ ಮೊದಲ ಸಶಸ್ತ್ರ ಪಡೆ ಭಾರತೀಯ ಸೇನೆಯದ್ದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ