image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಾಂಗ್ಲಾದೇಶದೊಂದಿಗೆ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಇನ್ನೊಂದು ವರ್ಷದಲ್ಲಿ ಮುಗಿದರೆ, ಮುಂದೇನು...?

ಬಾಂಗ್ಲಾದೇಶದೊಂದಿಗೆ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಇನ್ನೊಂದು ವರ್ಷದಲ್ಲಿ ಮುಗಿದರೆ, ಮುಂದೇನು...?

ನವದೆಹಲಿ : ಶೇಖ್‌ ಹಸೀನಾ ಪದಚ್ಯುತಿ, ಷರೀಷ್ ಒಸ್ಮಾನ್ ಹಾದಿ ಹತ್ಯೆ ನಂತರದಲ್ಲಿ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಹಿಂಸಾಚಾರ, ಭಾರತ ವಿರೋಧಿ ಧೋರಣೆಯ ನಂತರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಇದೇ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಮುಗಿಯಲು ಇನ್ನೊಂದೇ ವರ್ಷ ಬಾಕಿ ಇದೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಗಂಗಾ ನದಿ ನೀರು ಹಂಚಿಕೆ ಸಂಬಂಧಿಸಿದಂತೆ 1996ರಲ್ಲಿ ನಡೆದ ಒಪ್ಪಂದವನ್ನು ದ್ವಿಪಕ್ಷೀಯ ರಾಜತಾಂತ್ರಿಕ ವಿಜಯ ಎಂದೇ ಬಣ್ಣಿಸಲಾಗಿತ್ತು. ನೀರಿನ ಅಭಾವ ತೀವ್ರವಾದ ಋತುಮಾನದಲ್ಲಿ ಅತ್ಯಮೂಲ್ಯವಾದ ನದಿ ನೀರನ್ನು ಹಂಚಿಕೆ ಮಾಡುವ ಉದ್ದೇಶದಿಂದ 30 ವರ್ಷಗಳ ಅವಧಿಗೆ ಭಾರತ ಹಾಗೂ ಬಾಂಗ್ಲಾದೇಶ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದು 2026ರ ಡಿಸೆಂಬರ್‌ನಲ್ಲಿ ಅಂತ್ಯವಾಗಲಿದೆ. ಈ ಒಪ್ಪಂದ ಮುಂದುವರಿಸುವ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಆರಂಭವಾಗಿದೆ.

1960ರಲ್ಲಿ ಫರಕ್ಕಾ ಬ್ಯಾರೇಜ್ ನಿರ್ಮಾಣ ಆರಂಭವಾಯಿತು. ಗಂಗಾ ನದಿ ನೀರನ್ನು ಹೂಗ್ಲಿಗೆ ತಿರುಗಿಸಿದಲ್ಲಿ ಅಲ್ಲಿರುವ ಹೂಳನ್ನು ಕೊಚ್ಚಿ ಹೋಗುವಂತೆ ಮಾಡುವುದು ಮತ್ತು ಕೋಲ್ಕತ್ತ ಬಂದರಿಗೆ ನದಿ ನೀರಿನ ಹರಿವು ಹೆಚ್ಚಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಭಿನ್ನಾಭಿಪ್ರಾಯಗಳೊಂದಿಗೆ ಆರಂಭವಾದ ಈ ಕಾಮಗಾರಿ 1975ರಲ್ಲಿ ಪೂರ್ಣಗೊಂಡಿತು. ಬ್ಯಾರೇಜ್‌ನಿಂದಾಗಿ ನದಿ ಹರಿಯುವ ಪ್ರದೇಶದ ಕೆಳ ಭಾಗದಲ್ಲಿರುವ ಬಾಂಗ್ಲಾದೇಶಕ್ಕೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತದೆ ಎಂಬ ಕೂಗು ಎದ್ದಿತು. ನೀರಿನ ಹರಿವು ಕಡಿಮೆಯಾದರೆ ಸವಳು ಹೆಚ್ಚಾಗುತ್ತದೆ. ಅದು ಕೃಷಿ, ಮೀನುಗಾರಿಕೆ ಮತ್ತು ದೋಣಿ ಸಂಚಾರಕ್ಕೂ ತೊಂದರೆಯಾಗಲಿದೆ ಎಂದು ಬಾಂಗ್ಲಾ ವಾದ ಮಂಡಿಸಿತು. ತಾತ್ಕಾಲಿಕ ಒಪ್ಪಂದಗಳು ನಡೆದರೂ, ರಾಜತಾಂತ್ರಿಕ ಸಂಘರ್ಷ ಮುಂದುವರಿಯುತ್ತಲೇ ಇತ್ತು. ಆದರೆ 1996ರಲ್ಲಿ ಇದಕ್ಕೊಂದು ಪೂರ್ಣ ವಿರಾಮ ಹೇಳುವಂತೆ ಭಾರತ ಮತ್ತು ಬಾಂಗ್ಲಾ ನಡುವೆ ಗಂಗಾ ನದಿ ನೀರಿನ ಹಂಚಿಕೆ ಒಪ್ಪಂದ ನಡೆಯಿತು. ಅಂದಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ದಶಕಗಳ ನದಿ ನೀರಿನ ವ್ಯಾಜ್ಯ ಸುಗಮವಾಗಿ ಬಗೆಹರಿದಿದ್ದಕ್ಕೆ ಇಡೀ ಜಗತ್ತೇ ಶ್ಲಾಘಿಸಿತು.

ಪ್ರತಿ ವರ್ಷ ಜನವರಿ 1 ಹಾಗೂ ಮೇ 31ರ ನಡುವೆ ಫರಕ್ಕಾ ಬ್ಯಾರೇಜ್‌ನಿಂದ ಹತ್ತು ದಿನಗಳಂತೆ ನೀರು ಹಂಚಿಕೆಯ ಸೂತ್ರ ಮಾಡಲಾಯಿತು. ನೀರಿನ ಹರಿವು 70 ಸಾವಿರ ಕ್ಯುಸೆಕ್‌ಗಿಂತ ಕೆಳಗಿದ್ದಲ್ಲಿ ಉಭಯ ರಾಷ್ಟ್ರಗಳು 50:50ರ ಅನುಪಾತದಂತೆ ಹಂಚಿಕೊಳ್ಳಬೇಕು. ಬ್ಯಾರೇಜ್‌ನಲ್ಲಿ ಒಂದೊಮ್ಮೆ ನೀರು 70 ಸಾವಿರ ಮತ್ತು 75 ಸಾವಿರ ಕ್ಯುಸೆಕ್‌ ಇದ್ದಲ್ಲಿ ಎರಡೂ ರಾಷ್ಟ್ರಗಳಿಗೆ ಕನಿಷ್ಠ ನೀರು ಹಂಚಿಕೆಯಾಗಬೇಕು. ಬಿರುಬೇಸಿಗೆಯ ಕಾಲವಾದ ಮಾರ್ಚ್ 11ರಿಂದ ಮೇ 10ರವರೆಗೆ ಎರಡೂ ರಾಷ್ಟ್ರಗಳು ಈ ಬ್ಯಾರೇಜ್‌ನಿಂದ ಕನಿಷ್ಠ 35 ಸಾವಿರ ಕ್ಯುಸೆಕ್‌ ನೀರನ್ನು ಪ್ರತಿ 10 ದಿನಗಳ ಅವಧಿಗೆ ಪಡೆಯುವಂತೆ ಈ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರ ನಿರ್ವಹಣೆಗೆ ಜಂಟಿ ನದಿಗಳ ಆಯೋಗ (JRC) ಅಡಿಯಲ್ಲಿ ಜಂಟಿ ಸಮಿತಿಯನ್ನು ರಚಿಸಲಾಗಿದೆ. ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಈ ಸಮಿತಿಯು ನೀರಿನ ಹರಿವಿನ ಮೇಲೆ ನಿಗಾ ಇಡಲಿದೆ ಎಂದು ಬಲ್ಲ ಮೂಲಗಳು ವರದಿ ಮಾಡಿವೆ.

Category
ಕರಾವಳಿ ತರಂಗಿಣಿ