ಮುಂಬೈ : ಮಹಾರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ ಮತ್ತು ಶಿವಸೇನೆ (ಮಹಾಯುತಿ) ಮೈತ್ರಿಕೂಟ ಸುನಾಮಿ ಎಬ್ಬಿಸಿದೆ. ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಮತದಾನದ ದಿನಾಂಕ ಹತ್ತಿರವಿರುವಾಗಲೇ, ಒಂದೇ ಒಂದು ಮತ ಚಲಾವಣೆಯಾಗುವ ಮುನ್ನವೇ ಮೈತ್ರಿಕೂಟವು ಬರೋಬ್ಬರಿ 66 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದರಿಂದ ಮಹಾರಾಷ್ಟ್ರದ ರಾಜಕೀಯ ಚಿತ್ರಣವೇ ಬದಲಾಗಿದೆ. ಪ್ರತಿಪಕ್ಷಗಳ ಅಭ್ಯರ್ಥಿಗಳು ಅಖಾಡದಿಂದ ಹಿಂದೆ ಸರಿದ ಕಾರಣ, ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿಗಳು ಯಾವುದೇ ಸ್ಪರ್ಧೆಯಿಲ್ಲದೆ 68 ಸ್ಥಾನಗಳಲ್ಲಿ (ಎನ್ಸಿಪಿ ಸೇರಿದಂತೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ಮುಂಬರುವ ಪೂರ್ಣ ಪ್ರಮಾಣದ ಫಲಿತಾಂಶದ ದಿಕ್ಸೂಚಿ ಎಂದು ವಿಶ್ಲೇಷಿಸಲಾಗುತ್ತಿದೆ.
ಕಲ್ಯಾಣ್ ಡೊಂಬಿವಿಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ಮತ್ತು ಶಿವಸೇನೆಯ 6 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇತ್ತ ಉತ್ತರ ಮಹಾರಾಷ್ಟ್ರದ ಜಲಗಾಂವ್ನಲ್ಲಿಯೂ ಬಿಜೆಪಿ-ಶಿವಸೇನೆ ತಲಾ ಆರು ಸ್ಥಾನಗಳನ್ನು ಹಂಚಿಕೊಂಡು ಗೆಲುವಿನ ನಗೆ ಬೀರಿದ್ದಾರೆ. ಪನ್ವೇಲ್ನಲ್ಲಿ 7 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಮಲ ಪಾಳಯದ ಭದ್ರಕೋಟೆಯನ್ನು ಸಾಬೀತುಪಡಿಸಿದ್ದಾರೆ. ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ಶರದ್ ಪವಾರ್ ಅವರ ಎನ್ಸಿಪಿ ಬಣದ ಪ್ರಬಲ ಹಿಡಿತವಿರುವ ಭಿವಂಡಿಯಲ್ಲೂ ಬಿಜೆಪಿ 6 ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಇನ್ನುಳಿದಂತೆ ಥಾಣೆಯಲ್ಲಿ ಶಿವಸೇನೆ 6 ಸ್ಥಾನಗಳನ್ನು ಜಯಿಸಿದ್ದರೆ, ಧುಲೆಯಲ್ಲಿ ಬಿಜೆಪಿ (3) ಮತ್ತು ಎನ್ಸಿಪಿ (2) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಹಲ್ಯಾ ನಗರದಲ್ಲೂ ಒಂದು ಸ್ಥಾನ ಬಿಜೆಪಿಯ ಪಾಲಾಗಿದೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಮಹಾರಾಷ್ಟ್ರದ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಭರ್ಜರಿ ಬಹುಮತದೊಂದಿಗೆ ಕ್ಲೀನ್ ಸ್ವೀಪ್ ಮಾಡುವ ಲಕ್ಷಣಗಳು ದಟ್ಟವಾಗಿವೆ. ವಿರೋಧ ಪಕ್ಷಗಳು ಅಖಾಡಕ್ಕೆ ಇಳಿಯುವ ಮುನ್ನವೇ ಮಂಡಿಯೂರಿರುವುದು ಮೈತ್ರಿಕೂಟದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ.