image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬುಡಕಟ್ಟು ಜನರ ಭೂಮಿ ಅತಿಕ್ರಮ : ಬುಗಿಲೆದ್ದ ಹಿಂಸಾಚಾರ

ಬುಡಕಟ್ಟು ಜನರ ಭೂಮಿ ಅತಿಕ್ರಮ : ಬುಗಿಲೆದ್ದ ಹಿಂಸಾಚಾರ

ಅಸ್ಸಾಂ : ಅಸ್ಸಾಂನ ಕರ್ಬಿ ಆಂಗ್ಲಾಂಗ್ ಮತ್ತು ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ಅಕ್ರಮವಾಗಿ ಬುಡಕಟ್ಟು ಜನರ ಭೂಮಿಯನ್ನು ಅತಿಕ್ರಮಿಸಿಕೊಂಡ ಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಸಂಘರ್ಷ ಮುಂದುವರಿದಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಸಿದ್ಧವಾಗಿದೆ ಎಂದು ಡಿಜಿಪಿ ಹರ್ಮೀತ್ ಸಿಂಗ್ ತಿಳಿಸಿದ್ದಾರೆ. ಹಿಂಸಾಚಾರದಲ್ಲಿ 48 ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದು, ಮುಂದಿನ ಹಂತದ ಮಾತುಕತೆಗಾಗಿ ದಿನಾಂಕ ನಿಗದಿಪಡಿಸಲಾಗಿದೆ ಎಂದು ಪೊಲೀಸ್‌ ಹಿರಿಯ ಅಧಿಕಾರಿ ಸಿಂಗ್‌ ಮಾಹಿತಿ ನೀಡಿದ್ದಾರೆ. ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಗುಂಪುಗೂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಜತೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದರು. ಆದರೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡನನ್ನು ವೈದ್ಯಕೀಯ ಪರೀಕ್ಷೆಗಾಗಿ ಗುವಾಹಟಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆತನನ್ನು ಬಂಧಿಸಲಾಗಿದೆ ಎಂಬ ತಪ್ಪು ಮಾಹಿತಿ ಹರಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು ಎಂದು ಡಿಜಿಪಿ ವಿವರಿಸಿದ್ದಾರೆ. ಪ್ರತಿಭಟನಾಕಾರರು ಒಂದು ಹಂತದಲ್ಲಿ ಸೇತುವೆಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಮುಂದಾದಾಗ ಪೊಲೀಸರು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದರು. ಆಗ ಉದ್ರಿಕ್ತ ಪ್ರತಿಭಟನಾಕಾರರು ಕಚ್ಛಾ ಬಾಂಬ್‌ ಹಾಗೂ ಕಲ್ಲುತೂರಾಟ ನಡೆಸಿದ್ದರು. ಅಲ್ಲದೇ ಬಿಲ್ಲು, ಬಾಣಗಳಿಂದ ದಾಳಿ ನಡೆಸಿದ ಪರಿಣಾಮ ಹಲವಾರು ಪೊಲೀಸರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಮಂಗಳವಾರ (ಡಿ.23) ಇಂಟರ್ನೆಟ್‌ ಮತ್ತು ಮೊಬೈಲ್‌ ನೆಟ್ವರ್ಕ್‌ ಸರ್ವೀಸ್‌ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿತ್ತು. ಈ ಸಮಯದಲ್ಲಿ ಟೆಲಿಫೋನ್‌ ಸರ್ವೀಸ್‌ ಮಾತ್ರ ಕಾರ್ಯಾಚರಿಸುತ್ತಿತ್ತು ಎಂದು ವರದಿ ತಿಳಿಸಿದೆ. ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್‌ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಬಿಗಿ ಬಂದೋಬಸ್ತ್‌ ಕೈಗೊಂಡಿರುವುದಾಗಿ ಐಎಎನ್‌ ಎಸ್‌ ವರದಿ ಮಾಡಿದೆ. ಕಳೆದ 12ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರತಿಭಟನಾಕಾರರು 15 ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, ಸ್ಥಳೀಯ ಪೊಲೀಸ್‌ ಠಾಣೆ ಮೇಲೂ ದಾಳಿ ನಡೆಸಿ, ಕರ್ಬಿ ಆಂಗ್ಲಾಂಗ್‌ ಸ್ವಾಯತ್ತ ಮಂಡಳಿಯ ಕಾರ್ಯಕಾರಿಣಿ ಸದಸ್ಯ ತುಲಿರಾಮ್‌ ರೋಂಗ್‌ ಹ್ಯಾಂಗ್‌ ನಿವಾಸಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿತ್ತು.

Category
ಕರಾವಳಿ ತರಂಗಿಣಿ