ಹೊಸದಿಲ್ಲಿ: ಮಹಾಯುತಿ ಸರಕಾರದಲ್ಲಿ ಅಂತಃಕಲಹ ವದಂತಿ ನಡುವೆಯೇ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆ ಮೂಲಕ, ಇನ್ನೇನು ಒಂದು ವರ್ಷ ಪೂರೈಸಲಿರುವ ಮಹಾಯುತಿ ಸರಕಾರದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸುವತ್ತ ತಮ್ಮ ಮಾತುಕತೆಯನ್ನು ಕೇಂದ್ರೀಕರಿಸಿದರು ಎಂದು ವರದಿಯಾಗಿದೆ. ಏಕನಾಥ್ ಶಿಂಧೆ ಹಾಗೂ ಅಮಿತ್ ಶಾ ನಡುವೆ ಸುಮಾರು 50 ನಿಮಿಷಗಳ ಕಾಲ ಮಾತುಕತೆ ನಡೆಯಿತು ಎಂದು ವರದಿಯಾಗಿದೆ. ಥಾಣೆ ಜಿಲ್ಲೆಯ ಕಲ್ಯಾಣ್-ಡೊಂಬಿವಿಲಿಯಲ್ಲಿ ಸ್ಥಳೀಯ ಮಟ್ಟದ ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿರುವ ಬಿಜೆಪಿಯ ನಡೆಯಿಂದ ಅಸಮಾಧಾನಗೊಂಡ ಶಿವಸೇನೆಯ ಸಚಿವರು, ಈ ವಾರ ನಡೆದಿದ್ದ ಸಚಿವ ಸಂಪುಟ ಸಭೆಯಿಂದ ದೂರ ಉಳಿದಿದ್ದರು. ಥಾಣೆ ಜಿಲ್ಲೆ ಏಕನಾಥ್ ಶಿಂದೆಯ ಭದ್ರಕೋಟೆಯಾಗಿದ್ದು, ಅವರ ಪುತ್ರ ಡಾ. ಶ್ರೀಕಾಂತ್ ಶಿಂಧೆ, ಕಲ್ಯಾಣ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಕಾಕತಾಳೀಯವೆಂಬಂತೆ, ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಕೂಡಾ ಡೊಂಬಿವಿಲಿಗೆ ಸೇರಿದವರಾಗಿದ್ದಾರೆ.